ಚುನಾವಣಾ ಬಾಂಡ್ | ದಾನಿಗಳ ಗೋಪ್ಯತೆಯನ್ನೂ ರಕ್ಷಿಸಬೇಕು: ಸಿಇಸಿ
ರಾಜೀವ್ ಕುಮಾರ್ | Photo : PTI
ಹೊಸದಿಲ್ಲಿ, ಮಾ.17: ಚುನಾವಣಾ ಆಯೋಗವು ಚುನಾವಣಾ ಬಾಂಡ್ ಗಳ ವಿಷಯದಲ್ಲಿ ಯಾವಾಗಲೂ ಪಾರದರ್ಶಕತೆಯ ಪರವಾಗಿದೆ, ಆದರೆ ದಾನಿಗಳ ಗೋಪ್ಯತೆಯನ್ನೂ ರಕ್ಷಿಸುವ ಅಗತ್ಯವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ‘ದೇಶವು ಈಗ ದಾನಿಗಳ ಗೋಪ್ಯತೆಯೂ ಪರಿಗಣಿಸಲ್ಪಡುವ ಸಾಂಸ್ಥಿಕ ಕಾರ್ಯ ವಿಧಾನದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕು. ಆದರೆ ಚುನಾವಣೆಗಳಲ್ಲಿ ಕಪ್ಪುಹಣವೂ ಬಳಕೆಯಾಗುತ್ತಿದೆ ಮತ್ತು ಚುನಾವಣೆ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಲೆಕ್ಕಕ್ಕೆ ಸಿಗದ ದೇಣಿಗೆಗಳನ್ನು ಹೇಗೆ ನಿಯಂತ್ರಿಸಬೇಕು ಎನ್ನುವ ಬಗ್ಗೆ ಇಡೀ ರಾಷ್ಟ್ರವು ಒಂದಾಗಿ ಕಾರ್ಯಾಚರಿಸಬೇಕಿದೆ ’ಎಂದರು.
ಎಲ್ಲ ರಾಜಕೀಯ ಪಕ್ಷಗಳು ತಾವು ಸ್ವೀಕರಿಸಿರುವ ದೇಣಿಗೆಗಳು ಮತ್ತು ಆ ಪೈಕಿ ಎಷ್ಟು ಹಣವನ್ನು ವೆಚ್ಚ ಮಾಡಲಾಗಿದೆ ಎಂಬ ವಿವರಗಳನ್ನು ಬಹಿರಂಗಗೊಳಿಸುವುದನ್ನು ಚುನಾವಣಾ ಆಯೋಗವು ಕಡ್ಡಾಯಗೊಳಿಸಿದೆ ಎಂದೂ ಕುಮಾರ್ ಹೇಳಿದರು.