ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವಿಳಂಬಕ್ಕೆ ಮಳೆ, ಹಬ್ಬ ಹಾಗೂ ಭದ್ರತಾ ಪಡೆಗಳ ಕೊರತೆಯ ಕಾರಣ ಹೇಳಿದ ಚುನಾವಣಾ ಆಯೋಗ
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ತೀವ್ರ ಮಳೆಯಾಗುತ್ತಿರುವುದು, ದೀರ್ಘಾವಧಿಯ ಹಬ್ಬಗಳ ಋತು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇರುವುದರಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ವಿಳಂಬಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ಹೆಚ್ಚಿನ ಭದ್ರತಾ ಪಡೆಗಳ ಅವಶ್ಯಕತೆ ಇರುವುದರಿಂದ, ಶುಕ್ರವಾರ ಪ್ರಕಟಿಸಲಾದ ಚುನಾವಣಾ ವೇಳಾಪಟ್ಟಿಯಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ.
ಈ ಹಿಂದೆ ಹರ್ಯಾಣ ವಿಧಾನಸಭಾ ಚುನಾವಣೆಯೊಂದಿಗೇ ಮಹಾರಾಷ್ಟ್ರ ಚುನಾವಣೆಯನ್ನೂ ಪ್ರಕಟಿಸಲಾಗಿದ್ದರೂ, ಈ ಬಾರಿಯೇಕೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಹರ್ಯಾಣ ವಿಧಾನಸಭೆಯ ಅವಧಿಯು ನವೆಂಬರ್ 3, 2024ರಂದು ಅಂತ್ಯಗೊಳ್ಳಲಿದ್ದರೆ, ಮಹಾರಾಷ್ಟ್ರ ವಿಧಾನಸಭೆಯ ಅವಧಿಯು ನವೆಂಬರ್ 26, 2024ರಂದು ಅಂತ್ಯಗೊಳ್ಳಲಿದೆ ಎಂದು ವಿವರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಯಬೇಕಿದ್ದು, ಹರ್ಯಾಣ ಚುನಾವಣಾ ದಿನಾಂಕವನ್ನು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ಮಧ್ಯಭಾಗದಲ್ಲಿ ಪ್ರಕಟಿಸಬೇಕಾಗುತ್ತಿತ್ತು. ಅದರ ಬದಲು ಅಕ್ಟೋಬರ್ 4ರವರೆಗೂ ಕಾದಿದ್ದರೆ, ಹರ್ಯಾಣ ವಿಧಾನಸಭೆಯು ನವೆಂಬರ್ 3ಕ್ಕೂ ಮುಂಚೆ ಅಸ್ತಿತ್ವಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಆಯ್ಕೆ ಮಾತ್ರ ನಮ್ಮ ಮುಂದಿತ್ತು ಎಂದೂ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ಚುನಾವಣೆಗಳು ಮುಕ್ತಾಯಗೊಂಡ ನಂತರ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ ಎನ್ನಲಾಗಿದೆ. ಜನವರಿ 5, 2025ರಂದು ಅಂತ್ಯವಾಗಲಿರುವ ಜಾರ್ಖಂಡ್ ವಿಧಾನಸಭೆಯೊಂದಿಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.