ಚುನಾವಣಾ ಆಯೋಗವು ವಿಚಾರಣಾಧೀನ ಕೈದಿಗಳ ಹಕ್ಕುಗಳ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿಲ್ಲ: ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು ವಿಚಾರಣಾಧೀನ ಕೈದಿಗಳ ಹಕ್ಕುಗಳ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂದು ಎತ್ತಿ ಹಿಡಿದಿರುವ ದಿಲ್ಲಿ ಉಚ್ಚನ್ಯಾಯಾಲಯವು, ಬಂಧಿತ ರಾಜಕಾರಣಿಗಳು ಅಥವಾ ಅಭ್ಯರ್ಥಿಗಳು ಚುನಾವಣಾ ಪ್ರಚಾರ ನಡೆಸಲು ಅವಕಾಶ ಕಲ್ಪಿಸುವ ಕಾರ್ಯವಿಧಾನವೊಂದನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಜಾಗೊಳಿಸಿದೆ.
ಹಂಗಾಮಿ ಮುಖ್ಯ ನ್ಯಾಯಾಧೀಶ ಮನಮೋಹನ ಮತ್ತು ನ್ಯಾ.ಮನಮೀತ್ ಪಿ.ಎಸ್.ಅರೋರಾ ಅವರ ಪೀಠವು ಬುಧವಾರ ಅರ್ಜಿಯನ್ನು ವಜಾಗೊಳಿಸಿದ್ದು, ವಿವರವಾದ ಆದೇಶವನ್ನು ಗುರುವಾರವಷ್ಟೇ ಲಭ್ಯವಾಗಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಿದ್ದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಅಮರಜೀತ ಗುಪ್ತಾ ಅವರು, ವಿಚಾರಣಾಧೀನ ನಾಯಕರು ಅಥವಾ ಅಭ್ಯರ್ಥಿಗಳು ವರ್ಚುವಲ್ ವಿಧಾನದಲ್ಲಿ ಚುನಾವಣಾ ಪ್ರಚಾರ ನಡೆಸಲು ಮಾರ್ಗಸೂಚಿಗಳನ್ನು ರೂಪಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ಕೋರಿದ್ದರು.
ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ರಾಜಕೀಯ ಪಕ್ಷದ ನಾಯಕ ಅಥವಾ ಅಭ್ಯರ್ಥಿಯನ್ನು ಬಂಧಿಸಿದರೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಕೇಂದ್ರ ಸರಕಾರಕ್ಕೆ ನಿರ್ದೇಶನಗಳನ್ನೂ ಅರ್ಜಿದಾರರು ಕೋರಿದ್ದರು.
ಅಬಕಾರಿ ನೀತಿ ಪ್ರಕರಣದಲ್ಲಿ ಮಾ.21ರಂದು ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಬಂಧಿಸಲ್ಪಟ್ಟಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಹೆಸರಿಸದೆ ಗುಪ್ತಾ,ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರ ವಿರುದ್ಧ ಕ್ರಮದಿಂದ ತಾನು ನೊಂದಿದ್ದೇನೆ ಎಂದು ಹೇಳಿದ್ದರು.
ಅರ್ಜಿಯು ವಾಸ್ತವಿಕವಾಗಿ ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿದೆ ಮತ್ತು ನ್ಯಾಯಾಂಗದ ಆದೇಶದ ಮೇರೆಗೆ ಸದ್ರಿ ವ್ಯಕ್ತಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದು ಪ್ರಸ್ತುತ ಅರ್ಜಿಯ ವಿಷಯವಲ್ಲ,ಹೀಗಾಗಿ ಅದು ಅಂಗೀಕಾರಾರ್ಹವಲ್ಲ ಎಂದು ಉಚ್ಚನ್ಯಾಯಾಲಯವು ಎತ್ತಿ ಹಿಡಿಯಿತು.
ಕೇಜ್ರಿವಾಲ್ ಅವರಿಗೆ ನ್ಯಾಯಾಲಯವನ್ನು ಸಂಪರ್ಕಿಸಲು ಮಾರ್ಗ ಮತ್ತು ಅನುಕೂಲವಿದೆ,ಅವರು ಹಿಂದೆಯೂ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂದೂ ಪೀಠವು ಹೇಳಿತು.
ವಿಚಾರಣಾಧೀನ ಕೈದಿಗಳು ಜೈಲಿನಿಂದಲೇ ಚುನಾವಣಾ ಪ್ರಚಾರ ಮಾಡಲು ಅನುಮತಿಸುವ ನೀತಿಗೆ ಸಂಬಂಧಿಸಿದಂತೆ ನ್ಯಾಯಾಲಯವು, ವಿಚಾರಣಾಧೀನ ಕೈದಿಗಳ ಹಕ್ಕುಗಳನ್ನು ನಿಯಂತ್ರಿಸಲು ರಾಜ್ಯಗಳ ಜೈಲು ಕೈಪಿಡಿಗಳಲ್ಲಿಯ ನಿಯಮಗಳ ಬಗ್ಗೆ ಅರ್ಜಿದಾರರಿಗೆ ಜ್ಞಾನವಿಲ್ಲ, ಒಂದು ವೇಳೆ ಇದ್ದರೂ ನ್ಯಾಯಾಂಗ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಯಾವುದೇ ಅಧಿಕಾರವ್ಯಾಪ್ತಿಯನ್ನು ಹೊಂದಿಲ್ಲ ಎಂದು ಹೇಳಿತು.
ಕೇಂದ್ರವು ರಾಜಕೀಯ ಪಕ್ಷದ ನಾಯಕ ಅಥವಾ ಅಭ್ಯರ್ಥಿಯ ಬಂಧನದ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕೆಂಬ ಅರ್ಜಿದಾರರ ಕೋರಿಕೆಯು ಅವರಿಗೆ ಕಾನೂನು ತಿಳುವಳಿಕೆಯಿಲ್ಲ ಎನ್ನುವುದನ್ನು ಬಯಲಿಗೆಳೆದಿದೆ ಎಂದೂ ಟೀಕಿಸಿದ ಪೀಠವು,ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತದ ಅಜ್ಞಾನದಿಂದ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ಶಾಸಕಾಂಗ ಸ್ವರೂಪದ ನಿರ್ದೇಶನಗಳನ್ನು ಕೋರಲಾಗಿದ್ದು,ಇದು ನ್ಯಾಯಾಂಗ ಪರಿಶೀಲನೆಯ ಹೊರಗಿದೆ ಎಂದು ಹೇಳಿತು.
ಅರ್ಜಿಯನ್ನು ‘ಕ್ಷುಲ್ಲಕ’ ಎಂದು ಬಣ್ಣಿಸಿದ ಉಚ್ಚನ್ಯಾಯಾಲಯವು, ಅರ್ಜಿದಾರರಿಗೆ ದಂಡ ವಿಧಿಸಲು ತಾನು ಬಯಸಿದ್ದೆ. ಆದರೆ ಅರ್ಜಿದಾರರು ವಿದ್ಯಾರ್ಥಿಯಾಗಿರುವುದರಿಂದ ದಂಡದಿಂದ ವಿನಾಯಿತಿ ನೀಡುವಂತೆ ಅವರ ಪರ ವಕೀಲರು ಪ್ರಾರ್ಥಿಸಿಕೊಂಡಿದ್ದಾರೆ ಎಂದು ತಿಳಿಸಿತು.