ಮುಸ್ಲಿಂ ವಿರೋಧಿ ಭಾಷಣ ಮಾಡಿದ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ: ಸೀತಾರಾಮ್ ಯೆಚೂರಿ
ಸೀತಾರಾಮ್ ಯೆಚೂರಿ | PC : PTI
ಹೊಸದಿಲ್ಲಿ: ಹಲವು ದೂರುಗಳನ್ನು ಸಲ್ಲಿಸಿದ ಹೊರತಾಗಿಯೂ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಸಿಪಿಐ (ಮಾಕ್ಸಿಸ್ಟ್)ಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಚುನಾವಣಾ ಆಯೋಗಕ್ಕೆ ರವಿವಾರ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಂದರ್ಭ ಹಲವು ಬಿಜೆಪಿ ನಾಯಕರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕುರಿತಂತೆ ಪಕ್ಷ ಚುನಾವಣಾ ಆಯೋಗಕ್ಕೆ ಸರಣಿ ದೂರು ಸಲ್ಲಿಸಿದೆ. ಆದರೆ, ಚುನಾವಣಾ ಆಯೋಗ ಗಮನಹರಿಸಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಯೆಚೂರಿ ಹೇಳಿದ್ದಾರೆ.
ಅವರ (ಬಿಜೆಪಿ ನಾಯಕರ) ಹಸಿ ಸುಳ್ಳು, ತಿರುಚಿದ ಹೇಳಿಕೆ, ಭಯ ಹುಟ್ಟಿಸುವ ಹಾಗೂ ಕೋಮ ದ್ವೇಷದ ಹೇಳಿಕೆಯ ಬಗ್ಗೆ ಈ ಪತ್ರದಲ್ಲಿ ಗಮನ ಸೆಳೆಯಲಾಗಿದೆ. ಈ ಯಾವುದೇ ದೂರಿಗೆ ಸಂಬಂಧಿಸಿ ಚುನಾವಣಾ ಆಯೋಗ ಅಪರಾಧಿಗಳಿಗೆ ಶಿಕ್ಷೆ ನೀಡದೇ ಇರುವುದು ವಿಷಾದಕರ ಎಂದು ಯೆಚೂರಿ ಹೇಳಿದ್ದಾರೆ.
ಮೋದಿ ಅವರು ಎಪ್ರಿಲ್ನಲ್ಲಿ ಮಾಡಿದ ಭಾಷಣದ ಕುರಿತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಒಂದು ದೂರನ್ನು ಉಲ್ಲೇಖಿಸಿದ ಅವರು, ಮೋದಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಜೆಗಳ ಖಾಸಗಿ ಸಂಪತ್ತನ್ನು ಒಳನುಸುಳುಕೋರರಿಗೆ ಹಾಗೂ ಯಾರಿಗೆ ಹೆಚ್ಚು ಮಕ್ಕಳಿದೆಯೋ ಅವರಿಗೆ ನೀಡುತ್ತದೆ ಎಂದು ಮುಸ್ಲಿಮರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದ್ದರು ಎಂದಿದ್ದಾರೆ
ತನ್ನ ಪತ್ರದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಮೇ 18ರಂದು ನಡೆದ ಚುನಾವಣಾ ಸಭೆಯಲ್ಲಿ ನೀಡಿದ ಹೇಳಿಕೆಯನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ಈ ಸಭೆಯಲ್ಲಿ ಶರ್ಮಾ ಅವರು, ನಾಲ್ಕು ಬಾರಿ ವಿವಾಹವಾಗುವ ಅವರ ವ್ಯವಹಾರಕ್ಕೆ ಬಿಜೆಪಿ ನೇತೃತ್ವದ ಎನ್ ಡಿ ಎ ಅಂತ್ಯ ಹಾಡಲಿದೆ ಹಾಗೂ ಅದು ಮುಸ್ಲಿಂ ಧರ್ಮ ಗುರುಗಳ ಅಂಗಡಿ (ಮದರಸವನ್ನು ಉಲ್ಲೇಖಿಸಿ) ಯನ್ನು ಮುಚ್ಚಿಸಲಿದೆ ಎಂದು ಹೇಳಿದ್ದರು.
ಮೋದಿ, ಆದಿತ್ಯನಾಥ್ ಹಾಗೂ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಯೆಚೂರಿ, ಸಿಪಿಐ (ಎಂ)ನ ಈ ಹಿಂದಿನ ದೂರಿನ ಕುರಿತಂತೆ ಕೂಡ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.