ಎನ್ ಸಿ ಇ ಆರ್ ಟಿ ಸಮಾಜ ವಿಜ್ಞಾನದ ಪಠ್ಯ ಪುಸ್ತಕಗಳ ಪರಿಶೀಲನೆ ಕೋರಿ ಕೇಂದ್ರಕ್ಕೆ ಚುನಾವಣಾ ಆಯೋಗ ಪತ್ರ
Photo: scroll.in
ಹೊಸದಿಲ್ಲಿ: ವಾಸ್ತವಿಕ ತಪ್ಪು ಹಾಗೂ ಅಪೂರ್ಣತೆಗಳ ಹಿನ್ನೆಲೆಯಲ್ಲಿ ಎನ್ ಸಿ ಇ ಆರ್ ಟಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳನ್ನು ಪರಿಶೀಲಿಸಲು ಬಯಸುವುದಾಗಿ ಭಾರತೀಯ ಚುನಾವಣಾ ಆಯೋಗ ಕೇಂದ್ರ ಸರಕಾರವನ್ನು ಆಗ್ರಹಿಸಿದೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
‘‘ಸಮರ್ಪಕತೆ ಹಾಗೂ ಪ್ರಸ್ತುತತೆ’’ಗಾಗಿ ಪಠ್ಯ ಪುಸ್ತಕಗಳನ್ನು ತಾನು ಪರಿಶೀಲಿಸಲು ಬಯಸುವುದಾಗಿ ಚುನಾವಣಾ ಆಯೋಗ ಹೇಳಿದೆ. ಅಲ್ಲದೆ, ಈಗಿರುವ ಪಠ್ಯಗಳು ‘‘ನೈತಿಕ ಮತದಾನ ನಿರ್ಧಾರ’’ಗಳನ್ನು ಮಾಡುವಲ್ಲಿ ವಿದ್ಯಾರ್ಥಿಗಳನ್ನು ಸಿದ್ದಗೊಳಿಸುವುದಿಲ್ಲ ಎಂದು ಅದು ಪ್ರತಿಪಾದಿಸಿದೆ.
ಚುನಾವಣಾ ಆಯೋಗ ತಿದ್ದುಪಡಿ ಮಾಡಲು ಸಲಹೆ ನೀಡಿದ ಭಾಗಗಳೆಂದರೆ ಎನ್ ಸಿ ಇ ಆರ್ ಟಿ 2002ರಲ್ಲಿ ಅಳಿಸಿದ್ದ 6ನೇ ಹಾಗೂ 10ನೇ ತರಗತಿಯ ಪಠ್ಯ ಪುಸ್ತಕಗಳ ಅಧ್ಯಾಯಗಳು. ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡಲು ಎನ್ ಸಿ ಇ ಆರ್ ಟಿ ಈ ಅಧ್ಯಾಯಗಳನ್ನು ಅಳಿಸಲಾಗಿತ್ತು. ಅಳಿಸಲಾದ ಅಧ್ಯಾಯಗಳೆಂದರೆ 6ನೇ ತರಗತಿಯ ಪಠ್ಯ ಪುಸ್ತಕದ ‘‘ಪ್ರಜಾಸತ್ತಾತತ್ಮಕ ಸರಕಾರದ ಮುಖ್ಯ ಅಂಶಗಳು’’ ಹಾಗೂ 10ನೇ ತರಗತಿಯ ಪಠ್ಯದ ‘‘ಜನಪ್ರಿಯ ಹೋರಾಟಗಳು ಹಾಗೂ ಚಳುವಳಿಗಳು’’.
6ನೇ ತರಗತಿ ಪಠ್ಯ ಪುಸ್ತಕದ ಅಧ್ಯಾಯದ ಕುರಿತಂತೆ ಚುನಾವಣಾ ಆಯೋಗ, ‘‘ಎಳವೆಯಲ್ಲಿ ಸಂಘರ್ಷಗಳ ವಿವರಣೆ ಸಂಪೂರ್ಣ ಅನಗತ್ಯ’’ ಎಂದಿದೆ. 10ನೇ ತರಗತಿಯ ಪಠ್ಯ ಪುಸ್ತಕದ ಅಧ್ಯಾಯದ ಕುರಿತು ಅದು ಘರ್ಷಣೆಗಳು, ಹೋರಾಟಗಳು, ಜನಪ್ರಿಯ ಚಳುವಳಿಗಳು ಹಾಗೂ ಆಂದೋಲನಗಳ ಬಗ್ಗೆ ಹೆಚ್ಚು ಮಾತನಾಡಿವೆ. ಆದರೆ, ‘‘ಚುನಾವಣೆಯಲ್ಲಿ ಭಾಗವಹಿಸುವಿಕೆಗಾಗಿ ಪೌರತ್ವ ಅಭಿವೃದ್ಧಿ’’ಯಲ್ಲಿ ಯುವ ಜನರು ಒಳಗೊಳ್ಳುವ ಬಗ್ಗೆ ಮಾತನಾಡಿಲ್ಲ ಎಂದು ‘ದಿ ಪ್ರಿಂಟ್’ ವರದಿ ಹೇಳಿದೆ.
6ನೇ ತರಗತಿ ಪಠ್ಯ ಪುಸ್ತಕದಲ್ಲಿನ ಅಧ್ಯಾಯವು ಸಮಾನತೆ ಹಾಗೂ ತಾರತಮ್ಯದ ಪರಿಕಲ್ಪನೆ ಕುರಿತು ಮಾತನಾಡುತ್ತದೆ. ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿ, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ನೇತೃತ್ವದ ಚಳವಳಿಗಳನ್ನು ಉಲ್ಲೇಖಿಸುತ್ತದೆ. 10ನೇ ತರಗತಿಯ ಪಠ್ಯ ಪುಸ್ತಕದ ಅಳಿಸಲಾದ ಅಧ್ಯಾಯಗಳು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ನೇತೃತ್ವದ ನ್ಯಾಷನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ಸ್ ಹಾಗೂ ನೇಪಾಳದ ರಾಜ ಪ್ರಭುತ್ವದ ವಿರುದ್ಧದ ಪ್ರತಿಭಟನೆಯನ್ನು ಉಲ್ಲೇಖಿಸಿದೆ ಎಂದು ಅದು ಹೇಳಿದೆ.
ಈ ಪಠ್ಯ ಪುಸ್ತಕಗಳಲ್ಲಿ ತಿದ್ದುಪಡಿಯ ಸಲಹೆ ನೀಡುವ ತನ್ನ ಪ್ರಸ್ತಾವಕ್ಕೆ ಸಂಬಂಧಿಸಿ ಚುನಾವಣಾ ಆಯೋಗ 2016ರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿದೆ ಎಂದು ‘ದಿ ಪ್ರಿಂಟ್’ ಅಧಿಕೃತ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.