ಪ್ರಧಾನಿ ಕುರಿತು ʼಪನೌತಿʼ ಹೇಳಿಕೆಗೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್
ರಾಹುಲ್ ಗಾಂಧಿ Photo- PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕುರಿತಂತೆ ʻಪನೌತಿʼ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಇಂದು ನೋಟಿಸ್ ಜಾರಿಗೊಳಿಸಿದೆ. ತಮ್ಮ ಹೇಳಿಕೆ ಕುರಿತಂತೆ ವಿವರಣೆ ನೀಡುವಂತೆ ಆಯೋಗ ರಾಹುಲ್ ಗಾಂಧಿಗೆ ಸೂಚಿಸಿದೆ. ಬಿಜೆಪಿ ದಾಖಲಿಸಿರುವ ದೂರಿನ ಆಧಾರದಲ್ಲಿ ಈ ಕ್ರಮಕೈಗೊಳ್ಳಲಾಗಿದ್ದು ರಾಹುಲ್ ಅವರು ಶನಿವಾರದೊಳಗೆ ತಮ್ಮ ಉತ್ತರ ನೀಡಬೇಕಿದೆ.
ರಾಜಕೀಯ ಎದುರಾಳಿಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಚುನಾವಣಾ ಮಾದರಿ ನೀತಿ ಸಂಹಿತೆ ನಿಷೇಧಿಸುತ್ತದೆ ಎಂಬ ಅಂಶವನ್ನು ಚುನಾವಣಾ ಆಯೋಗವು ರಾಹುಲ್ಗೆ ಕಳುಹಿಸಿದ ನೋಟಿಸಿನಲ್ಲಿ ಹೇಳಿದೆ.
ಮಂಗಳವಾರ ರಾಜಸ್ಥಾನದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆ ಸಂದರ್ಭ ಪ್ರಮುಖ ವಿಚಾರಗಳಿಂದ ಜನರ ಗಮನವನ್ನು ಪ್ರಧಾನಿ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
“ಅವರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ʻಹಿಂದು-ಮುಸ್ಲಿಂʼ ಬಗ್ಗೆ ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಕ್ರಿಕೆಟ್ ಪಂದ್ಯಕ್ಕೆ ಹೋಗುತ್ತಾರೆ. ನಮ್ಮ ಹುಡುಗರು ವಿಶ್ವ ಕಪ್ ಗೆಲ್ಲುತ್ತಿದ್ದರು ಆದರೆ ಪನೌತಿ (ಅದೃಷ್ಟಹೀನ) ನಮಗೆ ಪಂದ್ಯ ಸೋಲುವಂತೆ ಮಾಡಿದೆ, ಪಿಎಂ ಎಂದರೆ ಪನೌತಿ ಮೋದಿ” ಎಂದು ವಿಶ್ವ ಕಪ್ ಫೈನಲ್ನಲ್ಲಿ ಭಾರತ ಸೋತಿರುವ ಕುರಿತು ಉಲ್ಲೇಖಿಸುತ್ತಾ ಅವರು ಹೇಳಿದ್ದರು.
ರಾಹುಲ್ ಹೇಳಿಕೆ ವೈರಲ್ ಆದರೆ, ಆಕ್ರೋಶಿತ ಬಿಜೆಪಿ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿತ್ತು.