ರಾಮ ಮಂದಿರ ಕುರಿತು ಚುನಾವಣಾ ಭಾಷಣದಲ್ಲಿ ಪ್ರಧಾನಿಯ ಉಲ್ಲೇಖವು ನೀತಿ ಸಂಹಿತೆ ಉಲ್ಲಂಘನೆಯಾಗದು ಎಂಬ ಚುನಾವಣಾ ಆಯೋಗದ ನಿರ್ಧಾರ ಶೀಘ್ರ ಪ್ರಕಟ: ವರದಿ
ನರೇಂದ್ರ ಮೋದಿ , ಚುನಾವಣಾ ಆಯೋಗ | PC : PTI
ಹೊಸದಿಲ್ಲಿ: ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣವನ್ನು ಉಲ್ಲೇಖಿಸಿರುವುದು ಧರ್ಮದ ಹೆಸರಿನಲ್ಲಿ ಮತಯಾಚನೆಯಾಗದು. ಸಿಖ್ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅಭಿವೃದ್ಧಿಯನ್ನು ಹಾಗೂ ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್ ತರಲು ಸರ್ಕಾರದ ಕ್ರಮವನ್ನು ಉಲ್ಲೇಖಿಸಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗದು ಎಂಬ ತನ್ನ ನಿರ್ಧಾರವನ್ನು ಚುನಾವಣಾ ಆಯೋಗ ಪ್ರಕಟಿಸುವ ನಿರೀಕ್ಷೆಯಿದೆ ಎಂದು indianexpress.com ವರದಿ ಮಾಡಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ತನ್ನ ಮೊದಲ ನಿರ್ಧಾರವನ್ನು ಆಯೋಗ ತಿಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ ವಕೀಲ ಆನಂದ್ ಎಸ್ ಜೊಂಡಾಲೆ ಎಂಬವರು ಪ್ರಧಾನಿ ಉತ್ತರ ಪ್ರದೇಶದ ಪಿಲಿಭೀತ್ ನಲ್ಲಿ ಎಪ್ರಿಲ್ 9ರಂದು ಮಾಡಿದ ಭಾಷಣ ಉಲ್ಲೇಖಿಸಿ ದೂರು ನೀಡಿದ್ದರು.
ಜೊಂಡಾಲೆ ಅವರು ದಿಲ್ಲಿ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ಈ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದರಿಂದ ಅವರ ದೂರಿನ ಕುರಿತು ತನ್ನ ನಿರ್ಧಾರವನ್ನು ಆಯೋಗ ಶೀಘ್ರ ಪ್ರಕಟಿಸುವ ನಿರೀಕ್ಷೆಯಿದೆ.
ಸೆಕ್ಷನ್ 153ಎ ಅಡಿಯಲ್ಲಿ ಮೋದಿ ವಿರುದ್ಧ ವಿವಿಧ ಧರ್ಮಗಳ ನಡುವೆ ದ್ವೇಷ ಪ್ರೋತ್ಸಾಹಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಬೇಕೆಂದು ಆನಂದ್ ತಮ್ಮ ದೂರಿನಲ್ಲಿ ಕೋರಿದ್ದರು. ಆದರೆ ಆಯೋಗದಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಎಪ್ರಿಲ್ 15ರಂದು ದಿಲ್ಲಿ ಹೈಕೋರ್ಟ್ ಕದ ತಟ್ಟಿದ್ದರು. ದೂರಿನ ಆಧಾರದಲ್ಲಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಿಲ್ಲಿ ಹೈಕೋರ್ಟ್ ಎಪ್ರಿಲ್ 15ರಂದು ಆಯೋಗಕ್ಕೆ ಸೂಚಿಸಿತ್ತು.
ರಾಜಸ್ಥಾನದ ರ್ಯಾಲಿಯಲ್ಲಿ ಪ್ರಧಾನಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ.