ಚುನಾವಣಾ ಆಯೋಗದ ಅಪ್ಡೇಟ್ ಆದ 4 ಹಂತದ ಮತದಾನದ ಅಂಕಿಅಂಶಗಳಲ್ಲಿ 1.07 ಕೋಟಿ ಮತಗಳಷ್ಟು ಏರಿಕೆ
ಹಿಂದಿ ಭಾಷೆಯ ರಾಜ್ಯಗಳಲ್ಲಿ ಚುನಾವಣಾ ಆಯೋಗದ ಅಂಕಿಸಂಖ್ಯೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮತದಾನ ನಡೆದ ದಿನದಂದೇ ತಡ ರಾತ್ರಿ ಚುನಾವಣಾ ಆಯೋಗವು ನೀಡಿದ ಮತದಾನ ಪ್ರಮಾಣದ ಅಂಕಿಅಂಶಗಳು ಹಾಗೂ ಇತ್ತೀಚೆಗೆ ಅಪ್ಡೇಟ್ ಮಾಡಿರುವ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ಇಲ್ಲಿಯ ತನಕ ನಡೆದ ನಾಲ್ಕು ಹಂತಗಳ ಲೋಕಸಭಾ ಚುನಾವಣಾ ಮತದಾನದಲ್ಲಿ ಸುಮಾರು 1.07 ಕೋಟಿಯಷ್ಟು ಮತಗಳ ವ್ಯತ್ಯಾಸವಿದೆ. ಅಂದರೆ ಇಲ್ಲಿಯ ತನಕ ಚುನಾವಣೆ ನಡೆದ 379 ಕ್ಷೇತ್ರಗಳಲ್ಲಿ ತಲಾ 28,000 ಮತಗಳ ಹೆಚ್ಚಳವಾದಂತಾಗಿದೆ.
ಮತದಾನ ದಿನದಂದು ರಾತ್ರಿ 10.30ರಿಂದ 11.30ರ ನಡುವೆ ಅಂಕಿಅಂಶಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ಆಯೋಗ ಬಿಡುಗಡೆಗೊಳಿಸಿರುವ ಅಂತಿಮ ಅಂಕಿಸಂಖ್ಯೆ ಪೋಸ್ಟಲ್ ಮತಗಳನ್ನು ಒಳಗೊಂಡಿಲ್ಲ ಹಾಗೂ ಇದು ಅಂದಾಜು ಟ್ರೆಂಡ್ಗಳು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಮೊದಲ ಹಂತದ ಮತದಾನ ನಡೆದ 11 ದಿನಗಳ ನಂತರ ಮತದಾನ ಪ್ರಮಾಣ ಅಪ್ಡೇಟ್ ಮಾಡಲಾಗಿದ್ದರೆ, 2, 3 ಮತ್ತು 4ನೇ ಹಂತದ ಚುನಾವಣೆಯ ನಾಲ್ಕು ದಿನಗಳ ನಂತರ ಈ ಪ್ರಕ್ರಿಯೆ ನಡೆದಿದೆ.
ವ್ಯತ್ಯಾಸವಾಗಿರುವ ಅಂಕಿಅಂಶಗಳನ್ನು ಗಮನಿಸಿದರೆ ಮೊದಲ ಹಂತದ ಚುನಾವಣೆಯಲ್ಲಿ 18.6 ಲಕ್ಷ ಮತಗಳು, ಎರಡನೇ ಹಂತದಲ್ಲಿ 32.2 ಲಕ್ಷ, ಮೂರನೇ ಹಂತದಲ್ಲಿ 22.1 ಲಕ್ಷ ಹಾಗೂ ನಾಲ್ಕನೇ ಹಂತದಲ್ಲಿ 33,9 ಲಕ್ಷ ಮತಗಳು ಹೀಗೆ ಒಟ್ಟು 1.07 ಕೋಟಿ ಮತಗಳು ಆಗಿವೆ.
ಆಂಧ್ರ ಪ್ರದೇಶದಲ್ಲಿ ಆರಂಭದಲ್ಲಿ ತಿಳಿಸಲಾದ ಅಂಕಿಅಂಶ ಮತ್ತು ಅಂತಿಮ ಡೇಟಾದಲ್ಲಿ 4.2% ವ್ಯತ್ಯಾಸವಿದೆ (ಇದು ಗರಿಷ್ಠ 17.2 ಲಕ್ಷ ಆಗಿದೆ). ಮಹಾರಾಷ್ಟ್ರದಲ್ಲಿ ಶೇ 2.4, ಅಂದರೆ 16.7 ಲಕ್ಷ, ಕೇರಳದಲ್ಲಿ ಶೇ 4.1 ಅಂದರೆ 11.4 ಲಕ್ಷ ಮತ್ತು ಅಸ್ಸಾಂನಲ್ಲಿ ಶೇ 4.2 ಅಂದರೆ 10.3 ಲಕ್ಷ ಮತಗಳಲ್ಲಿ ಏರಿಕೆಯಾಗಿದೆ.
ಅಸ್ಸಾಂನ ಅಂಕಿಅಂಶ ಗಮನಿಸಿದರೆ ತಲಾ ಕ್ಷೇತ್ರದಲ್ಲಿ 73,000ಕ್ಕೂ ಅಧಿಕ ಮತಗಳ ವ್ಯತ್ಯಾಸವಿದೆ. ಆಂಧ್ರಪ್ರದೇಶದಲ್ಲಿ 69,000 ಮತಗಳು ಹಾಗೂ ಕೇರಳದಲ್ಲಿ 57,000 ಮತಗಳು, ಕರ್ನಾಟಕದಲ್ಲಿ 51,000 ಮತ್ತು ಮಹಾರಾಷ್ಟ್ರದಲ್ಲಿ 48000 ಮತಗಳ ವ್ಯತ್ಯಾಸವಿದೆ.
ಪ್ರಮುಖವಾಗಿ ಗಮನಿಸಬೇಕಾದರೆ ಹಿಂದಿ ಭಾಷೆಯ ರಾಜ್ಯಗಳಲ್ಲಿ ಚುನಾವಣಾ ಆಯೋಗದ ಅಂಕಿಸಂಖ್ಯೆಗಳಲ್ಲಿ ವ್ಯತ್ಯಾಸ ಹೆಚ್ಚೇನೂ ಆಗಿಲ್ಲ.