ಚುನಾವಣಾ ಬಾಂಡ್ ಗೆ ಮರುಜೀವ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ | Photo: PTI
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ, ಎಲ್ಲ ಹಕ್ಕುದಾರರ ಜತೆ ವಿಸ್ತೃತ ಸಮಾಲೋಚನೆ ನಡೆಸಿ ಚುನಾವಣಾ ಬಾಂಡ್ ಯೋಜನೆಗೆ ಮರು ಜೀವ ನೀಡಲು ಉದ್ದೇಶಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ವಿವಾದಾತ್ಮಕ ರಾಜಕೀಯ ನೆರವು ಯೋಜನೆಯನ್ನು ಅನೂರ್ಜಿತಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿನ ಬಗೆಗೆ ಕೇಳಿದ ಪ್ರತಿಕ್ರಿಯೆಗೆ ಈ ಯೋಜನೆಯಡಿ ಕೆಲ ಬದಲಾವಣೆಗಳು ಅಗತ್ಯ ಎನ್ನುವುದನ್ನು ಒಪ್ಪಿಕೊಂಡರು.
ಆರ್.ಸುಕುಮಾರ್ ಮತ್ತು ಸುನೇತ್ರಾ ಚೌಧರಿ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "2024ರ ಲೋಕಸಭಾ ಚುನಾವಣೆಗೆ ಆರ್ಥಿಕ ಸ್ಥಿತಿಗತಿ ಅತ್ಯಂತ ಸೂಕ್ತವಾಗಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡಲಾಗಿದೆ" ಎಂದು ಸಮರ್ಥಿಸಿಕೊಂಡರು. ಉತ್ತರ- ದಕ್ಷಿಣ ವಿಭನತೆ ಮತ್ತು ಭ್ರಷ್ಟಾಚಾರ ವಿಚಾರವನ್ನು ಪ್ರಸ್ತಾಪಿಸುತ್ತಿರುವ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅವರು, ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಸಲಹೆಯನ್ನೂ ನೀಡಿದರು. ಈ ಚುನಾವಣೆಯಲ್ಲಿ ಬಿಜೆಪಿಯ 370 ಸ್ಥಾನಗಳ ಗುರಿ ಹೇಗೆ ಕಾರ್ಯಸಾಧು ಎನ್ನುವುದನ್ನೂ ವಿವರಿಸಿ, ದಕ್ಷಿಣ ಭಾರತದಲ್ಲಿ ದ್ರಾವಿಡ ಪಕ್ಷಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಆಪಾದಿಸಿದರು.
"ಚುನಾವಣಾ ಬಾಂಡ್ ಎಲ್ಲರಿಗೂ ಸ್ವೀಕಾರಾರ್ಹವಾಗುವಂತೆ ಮಾಡಲು, ಅದರಲ್ಲೂ ಪ್ರಮುಖವಾಗಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಹಾಗೂ ಕಪ್ಪು ಹಣ ಈ ಕ್ಷೇತ್ರಕ್ಕೆ ಪ್ರವೇಶಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಚೌಕಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಎಲ್ಲ ಹಕ್ಕುದಾರರ ಜತೆ ಸಮಾಲೋಚನೆಯನ್ನು ನಡೆಸಬೇಕಿದೆ" ಎಂದರು. ಕೇಂದ್ರ ಸರ್ಕಾರ ಈ ತೀರ್ಪಿನ ಪರಾಮರ್ಶೆಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
2018ರಲ್ಲಿ ಆರಂಭಿಸಲಾದ ಚುನಾವಣಾ ಬಾಂಡ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲ ಶಾಖೆಗಳಲ್ಲಿ ಖರೀದಿಸಲು ಅವಕಾಶವಿತ್ತು. ಈ ಯೋಜನೆಯಡಿ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ವಿದೇಶಿ ಸಂಸ್ಥೆಗಳು ಕೂಡಾ ನೀಡಿದ ದೇಣಿಗೆಗಳಿಗೆ ಶೇಕಡ 100ರಷ್ಟು ತೆರಿಗೆ ವಿನಾಯ್ತಿ ಇತ್ತು. ದೇಣಿಗೆ ನೀಡಿದ ವ್ಯಕ್ತಿಗಳ ಹೆಸರನ್ನು ಬ್ಯಾಂಕ್ ಹಾಗೂ ಸ್ವೀಕರಿಸಿದ ರಾಜಕೀಯ ಪಕ್ಷಗಳು ರಹಸ್ಯವಾಗಿ ಇಡಲು ಅವಕಾಶ ಇತ್ತು.