ಭಾವನಾತ್ಮಕ ವಿಚಾರಗಳನ್ನೇ ಮುನ್ನೆಲೆಗೆ ತಂದು, ವಾಸ್ತವ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಹೊಸದಿಲ್ಲಿ: ಭಾವನಾತ್ಮಕ ವಿಷಯಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು, ವಾಸ್ತವ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯುವುದು ದೇಶದ ಜನರಿಗೆ ಎಸಗುವ ದ್ರೋಹವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಷ್ಟ್ರೀಯ ಯುವ ದಿನಾಚರಣೆಯಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಯುವಜನರನ್ನು ದೇಶವೊಂದರ ಸಮೃದ್ಧಿಯ ಆಧಾರ ಹಾಗೂ ಶೋಷಿತರು ಹಾಗೂ ಬಡವರ ಸೇವೆಯನ್ನು ತಪಸ್ಸು ಎಂದು ತಿಳಿದಿದ್ದ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳನ್ನು ಸ್ಮರಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ.
“ನಮ್ಮ ಕನಸಿನ ಭಾರತದ ಗುರುತೇನು ಎಂದು ಯುವಜನರು ಚಿಂತಿಸಬೇಕಿದೆ. ಗುಣಮಟ್ಟದ ಬದುಕು ಅಥವಾ ಕೇವಲ ಭಾವನೆಗಳು? ಪ್ರಚೋದನಾಕಾರಿ ಘೋಷಣೆ ಕೂಗುವ ಯುವಕರು ಅಥವಾ ಉದ್ಯೋಗಸ್ಥ ಯುವಕರು? ಪ್ರೀತಿ ಅಥವಾ ದ್ವೇಷ?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
“ಇಂದು ಭಾವನಾತ್ಮಕ ವಿಷಯಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು, ವಾಸ್ತವ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿರುವುದು ದೇಶಕ್ಕೆ ಎಸಗುವ ದ್ರೋಹವಾಗುತ್ತದೆ” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಏರುತ್ತಿರುವ ನಿರುದ್ಯೋಗ ಹಾಗೂ ಹಣದುಬ್ಬರದ ಹೊರೆಯಿಂದ ಯುವಜನರು ಹಾಗೂ ಬಡವರು ಶಿಕ್ಷಣ ಪಡೆಯಲು, ಜೀವನ ನಡೆಸಲು ಹಾಗೂ ವೈದ್ಯಕೀಯ ನೆರವು ಪಡೆಯಲು ಒದ್ದಾಡುತ್ತಿರುವಾಗ ಸರ್ಕಾರವು ಅದನ್ನು ‘ಅಮೃತ ಕಾಲ’ ಎಂದು ಸಂಭ್ರಮಾಚರಣೆ ಮಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
“ಅಧಿಕಾರದ ಮದದಿಂದ ಚಕ್ರವರ್ತಿಯು ಮೈ ಮರೆತಿದ್ದು, ಆತ ನೆಲದ ವಾಸ್ತವದಿಂದ ಕಳಚಿಕೊಂಡಿದ್ದಾನೆ” ಎಂದೂ ಅವರು ಲೇವಡಿ ಮಾಡಿದ್ದಾರೆ.
“ಅದೇ ಕಾರಣಕ್ಕೆ ಅನ್ಯಾಯದ ಚಂಡಮಾರುತದ ನಡುವೆ ನ್ಯಾಯದ ಜ್ವಾಲೆಯನ್ನು ಜೀವಂತವಾಗಿಡಲು ಕೋಟ್ಯಂತರ ನ್ಯಾಯ ಯೋಧರು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದು, ನ್ಯಾಯದ ಹಕ್ಕು ದೊರೆಯುವವರೆಗೂ ನನ್ನ ಈ ಹೋರಾಟದಲ್ಲಿ ಜೊತೆಯಾಗುತ್ತಿದ್ದಾರೆ. ಸತ್ಯಕ್ಕೆ ಗೆಲುವಾಗಲಿದೆ, ನ್ಯಾಯಕ್ಕೆ ಗೆಲುವಾಗಲಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜನವರಿ 14ರಿಂದ ರಾಹುಲ್ ಗಾಂಧಿಯು ಮಣಿಪುರದಿಂದ ಭಾರತ್ ಜೋಡೊ ನ್ಯಾಯ್ ಯಾತ್ರೆ ಪ್ರಾರಂಭಿಸುತ್ತಿದ್ದು, ಈ ಯಾತ್ರೆಯು 15 ರಾಜ್ಯಗಳ ಮೂಲಕ ಒಟ್ಟು 6,700 ಕಿಮೀ ಹಾದು ಹೋಗಿ, ಮಹಾರಾಷ್ಟ್ರದಲ್ಲಿ ಅಂತ್ಯಗೊಳ್ಳಲಿದೆ.