ಮೋದಿ- ಶಾ ಸರಕಾರ ಅಧಿಕಾರಕ್ಕೆ ಮರಳಿದರೆ ಪ್ರಜಾಪ್ರಭುತ್ವದ ಅಂತ್ಯ : ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | PC : PTI
ಸತ್ನಾ(ಮಧ್ಯ ಪ್ರದೇಶ) : ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ರವಿವಾರ ಇಲ್ಲಿ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಮೋದಿ-ಶಾ ಸರಕಾರವು ಅಧಿಕಾರಕ್ಕೆ ಮರಳಿದರೆ ದೇಶದಲ್ಲಿ ಪ್ರಜಾಪ್ರಭುತ್ವವು ಅಂತ್ಯಗೊಳ್ಳಲಿದೆ ಎಂದು ಪ್ರತಿಪಾದಿಸಿದರು.
ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ ಖರ್ಗೆ, ಅವರು ಸಂವಿಧಾನವನ್ನು ಸಹ ರದ್ದುಗೊಳಿಸುತ್ತಾರೆ ಎಂದು ಕಿಡಿಕಾರಿದರು.
ಸತ್ನಾ ರ್ಯಾಲಿಯಲ್ಲಿ ಭಾಗವಹಿಸಬೇಕಿದ್ದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅನಾರೋಗ್ಯದಿಂದಾಗಿ ಗೈರಾಗಿದ್ದರು.
ಸತ್ನಾ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಎ.26ರಂದು ಮತದಾನ ನಡೆಯಲಿದೆ.
ಕಾಂಗ್ರೆಸ್ ಅಭ್ಯರ್ಥಿ ಸಿದ್ಧಾರ್ಥ ಕುಶ್ವಾಹ ಅವರ ಬೆಂಬಲಾರ್ಥ ನಡೆದ ರ್ಯಾಲಿಯಲ್ಲಿ ಖರ್ಗೆ,ಮೋದಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಕಿ ಗ್ಯಾರಂಟಿ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಅವರ ಪಕ್ಷದ ಹೆಸರನ್ನು ಉಲ್ಲೇಖಿಸದೇ ಹೇಳಿದರು.
ಪ್ರಧಾನಿಯಾದರೆ ವಿದೇಶಗಳಲ್ಲಿ ಇಡಲಾಗಿರುವ ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವ ಮೂಲಕ ಪ್ರತಿ ವ್ಯಕ್ತಿಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಮೋದಿ ಭರವಸೆ ನೀಡಿದ್ದರು. ಅದು ನಿಮಗೆ ಸಿಕ್ಕಿದೆಯೇ ಎಂದು ಖರ್ಗೆ ಜನರನ್ನು ಪ್ರಶ್ನಿಸಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮೋದಿ ಈ ದೇಶದ ಯುವಜನರಿಗೆ ಭರವಸೆ ನೀಡಿದ್ದರು. ಹತ್ತು ವರ್ಷಗಳು ಕಳೆದಿವೆ. ನಿಮಗೆ 20 ಕೋಟಿ ಉದ್ಯೋಗಗಳು ಸಿಕ್ಕಿವೆಯೇ? ಮೋದಿ ಇಲ್ಲಿಗೆ ಬಂದು ನಿಮ್ಮ ಮತಗಳನ್ನು ಯಾಚಿಸಿದಾಗ 15 ಲಕ್ಷ ರೂ.ಎಲ್ಲಿದೆ ಎಂದು ಕೇಳಿ ಎಂದರು. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮೋದಿ ಭರವಸೆ ನೀಡಿದ್ದರು,ಅದೂ ಈಡೇರಿಲ್ಲ ಎಂದರು.
2014ಕ್ಕೆ ಮುನ್ನ ಯುಪಿಎ ಅಧಿಕಾರದಲ್ಲಿದ್ದಾಗ ಅಡಿಗೆ ಅನಿಲ, ಹಾಲು, ಹಿಟ್ಟು ಮತ್ತು ಬೇಳೆಕಾಳುಗಳ ಬೆಲೆಗಳನ್ನು ಪಟ್ಟಿ ಮಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ ಇವುಗಳ ಬೆಲೆಗಳು ಗಗನಕ್ಕೇರಿವೆ. ಇವು ಮೋದಿಯವರ ಅಚ್ಛೇ ದಿನ್ಗಳು. ತಾನು ಅಚ್ಛೇ ದಿನ್ ತರುವುದಾಗಿ ಈ ವ್ಯಕ್ತಿ ಯಾವಾಗಲೂ ಹೇಳುತ್ತಿರುತ್ತಾರೆ. ಅವರು ಬಹಳಷ್ಟು ಸುಳ್ಳುಗಳನ್ನು ಹೇಳುತ್ತಾರೆ. ಅದಕ್ಕಾಗಿಯೇ ನಾನು ಅವರನ್ನು ಸುಳ್ಳುಗಳ ಸರದಾರ ಎಂದು ಕರೆಯುತ್ತೇನೆ ’ ಎಂದರು.
ದೇಶದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅಧಿಕವಾಗಿದೆ, ಆದರೆ ಅದು ಲೆಕ್ಕಕ್ಕೇ ಇಲ್ಲ ಎಂದು ಖರ್ಗೆ, ಮೋದಿ ಮತ್ತು ಶಾ ವಿಮಾನ ನಿಲ್ದಾಣಗಳು,ರಸ್ತೆಗಳು,ಭೂಮಿ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಬೃಹತ್ ಕಾರ್ಖಾನೆಗಳಂತಹ ದೇಶದ ಆಸ್ತಿಗಳನ್ನು ಅದಾನಿ ಮತ್ತು ಅಂಬಾನಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶ್ರೀಮಂತರ 16,000 ಕೋಟಿ ರೂ.ಗಳ ಸಾಲಗಳನ್ನು ಮನ್ನಾ ಮಾಡಲಾಗಿದೆ. ಆದರೆ ಬಡ ರೈತರ ಸಾಲಗಳನ್ನು ಇನ್ನೂ ಮನ್ನಾ ಮಾಡಲಾಗಿಲ್ಲ ಎಂದ ಅವರು, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿಯವರ ನಾಯಕತ್ವದಡಿ 72,000 ಕೋಟಿ ರೂ.ಗಳ ಕೃಷಿ ಸಾಲಗಳನ್ನು ಮನ್ನಾ ಮಾಡಲಾಗಿತ್ತು ಎಂದು ಹೇಳಿದರು.
ಇತರ ಪಕ್ಷಗಳಲ್ಲಿರುವವರೆಗೂ ‘ಭ್ರಷ್ಟ’ರಾಗಿದ್ದವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿರುವುದಕ್ಕಾಗಿ ಮೋದಿ ಮತ್ತು ಶಾ ವಿರುದ್ಧ ದಾಳಿ ನಡೆಸಿದ ಖರ್ಗೆ, ಶಾ ಅವರು ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮುನ್ನ ಅವರನ್ನು ಶುದ್ಧರನ್ನಾಗಿಸಲು ವಾಷಿಂಗ್ ಮಷಿನ್ ಜೊತೆಗೆ ಬೃಹತ್ ಲಾಂಡ್ರಿಯನ್ನು ಹೊಂದಿದ್ದಾರೆ ಎಂದು ಕುಟುಕಿದರು.