ರಶ್ಯ | ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ ಕೇರಳ ನಿವಾಸಿಯ ಮೃತದೇಹ

Credit: Special Arrangement. \ deccanherald.com
ತಿರುವನಂತಪುರಂ: ರಶ್ಯ-ಉಕ್ರೇನ್ ಯುದ್ಧ ವಲಯದಲ್ಲಿ ರಶ್ಯ ಸೇನೆಗಾಗಿ ಕೆಲಸ ನಿರ್ವಹಿಸುವಾಗ ಮೃತಪಟ್ಟಿದ್ದಾರೆ ಎಂದು ಹೇಳಲಾಗಿರುವ ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿ ಬಿನಿಲ್ ಬಾಬು (32) ಮೃತಹದೇಹ ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ ಎಂದು deccanherald.com ವರದಿ ಮಾಡಿದೆ.
ಬಾಬು ಶವಕ್ಕಾಗಿ ಅವರ ಕುಟುಂಬಸ್ಥರ ಕಾಯುವಿಕೆ ಮುಂದುವರಿದಿದ್ದು, ಯುದ್ಧದಲ್ಲಿ ಗಾಯಗೊಂಡು, ತವರಿಗೆ ಮರಳಲು ರಶ್ಯ ಪ್ರಾಧಿಕಾರಗಳಿಂದ ದಯಾ ಭಿಕ್ಷೆ ಕೋರಿರುವ ಅವರ ಮತ್ತೊಬ್ಬ ಸಂಬಂಧಿ ಜೈನ್ ಕುರಿಯನ್ (27), ಇನ್ನೂ ಮಾಸ್ಕೊದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
deccanherald.com ಸುದ್ದಿ ಸಂಸ್ಥೆಗೆ ಮಾಸ್ಕೊದಿಂದ ಧ್ವನಿ ಸಂದೇಶ ಕಳಿಸಿರುವ ಕುರಿಯನ್, “ನನ್ನನ್ನು ಭೇಟಿ ಮಾಡಲು ಬರುತ್ತಿರುವ ರಶ್ಯ ಅಧಿಕಾರಿಗಳು ಹಾಗೂ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಬಾಬು ಮೃತ ದೇಹ ಹಾಗೂ ನನ್ನ ಮರಳುವಿಕೆಯ ಕುರಿತು ಕೇಳುತ್ತಲೇ ಇದ್ದೇನೆ. ಆದರೆ, ಈವರೆಗೂ ನನಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
ಮೃತ ಬಾಬು ತಮ್ಮ ಪೋಷಕರು, ತಮ್ಮ ಪತ್ನಿ ಜಾಯ್ಸಿ ಹಾಗೂ ತಾವು ನೋಡಲೇ ಸಾಧ್ಯವಾಗದ ತಮ್ಮ ಆರು ತಿಂಗಳ ಪುತ್ರ ಜೈಕ್ ನನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರ ಇನ್ನೂ ತವರಿಗೆ ಮರಳದಿರುವುದರಿಂದ, ಅವರು ಕುಟುಂಬದ ಸದಸ್ಯರು ತೀವ್ರ ಮಾನಸಿಕ ಕ್ಷೋಭೆಗೀಡಾಗಿದ್ದಾರೆ.
“ಪಾರ್ಥಿವ ಶರೀರ ಸ್ವೀಕರಿಸುವುದರಲ್ಲಿ ವಿಳಂಬವಾಗುತ್ತಿರುವುದರಿಂದ ನಾವೆಲ್ಲ ತುಂಬಾ ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇವೆ. ಇಲ್ಲಿನ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿರುವ ಜಾಯ್ಸಿ, ತಮ್ಮ ನೋವನ್ನು ಕೊಂಚವಾದರೂ ಮರೆಯಲು ಮತ್ತೆ ತಮ್ಮ ಕರ್ತವ್ಯವನ್ನು ಪುನಾರಂಭಿಸಿದ್ದಾರೆ” ಎಂದು ಬಾಬು ಅವರ ಸಂಬಂಧಿಕರಾದ ಸಂತೋಷ್ ಹೇಳಿದ್ದಾರೆ.
ಇದಕ್ಕೂ ಮುನ್ನ, ತ್ರಿಶೂರ್ ನ ಮತ್ತೊಬ್ಬ ನಿವಾಸಿಯಾದ ಸಂದೀಪ್ ಕೂಡಾ ಯುದ್ಧ ಭೂಮಿಯಲ್ಲಿ ಹತರಾಗಿದ್ದರು ಹಾಗೂ ಅವರ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.