ಪಡಿತರ ವಿತರಣೆ ಹಗರಣ: ಈಡಿಯಿಂದ ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಮಲಿಕ್ ಬಂಧನ
Photo: X/@PTI_News
ಕೋಲ್ಕತಾ: ಜಾರಿ ನಿರ್ದೇಶನಾಲಯ (ಈ.ಡಿ.)ವು ಪಶ್ಚಿಮ ಬಂಗಾಳದಲ್ಲಿಯ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯದ ಸಚಿವ ಜ್ಯೋತಿಪ್ರಿಯ ಮಲಿಕ್ ಅವರನ್ನು ಶುಕ್ರವಾರ ಬಂಧಿಸಿದೆ. ಮಲಿಕ್ ಅವರನ್ನು 18 ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ ಬಳಿಕ ಇಂದು ನಸುಕಿನಲ್ಲಿ ಅವರನ್ನು ಬಂಧಿಸಲಾಗಿದೆ.
ಪ್ರಕರಣವು ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಪಡಿತರ ವಿತರಣೆಯಲ್ಲಿ ನಡೆದಿತ್ತೆನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು,ಆಗ ಮಲಿಕ್ ಪ.ಬಂಗಾಳದ ಆಹಾರ ಸಚಿವರಾಗಿದ್ದರು. ಪ್ರಸ್ತುತ ಅವರು ಅರಣ್ಯ ಖಾತೆಯನ್ನು ಹೊಂದಿದ್ದಾರೆ.
ಅ.14ರಂದು ಬಂಧಿಸಲ್ಪಟ್ಟಿರುವ ಉದ್ಯಮಿ ಬಕಿಬುರ್ ರಹ್ಮಾನ್ ಜೊತೆ ಮಲಿಕ್ ಸಂಪರ್ಕಗಳ ಕುರಿತು ಈ.ಡಿ ತನಿಖೆ ನಡೆಸುತ್ತಿದೆ. ರಹ್ಮಾನ್ ಪಡಿತರ ಅಕ್ಕಿ ಮತ್ತು ಗೋದಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಆರೋಪಿಯಾಗಿದ್ದಾರೆ.
ಈ.ಡಿ.ಗುರುವಾರ ಮಲಿಕ್ಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಎಂಟು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿತ್ತು. ಉತ್ತರ 24 ಪರಗಣಗಳ ಜಿಲ್ಲೆಯಲ್ಲಿನ ಮಲಿಕ್ ಅವರ ಆಪ್ತ ಸಹಾಯಕ ಅಮಿತ್ ಡೇ ನಿವಾಸವನ್ನೂ ಅದು ಶೋಧಿಸಿತ್ತು.
‘ನಾನೂ ಘೋರ ಪಿತೂರಿಯ ಬಲಿಪಶುವಾಗಿದ್ದೇನೆ’ ಎಂದು ಮಲಿಕ್ ತನ್ನನ್ನು ಈ.ಡಿ.ವಶಕ್ಕೆ ತೆಗೆದುಕೊಂಡ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
‘ಮಲಿಕ್ ಆರೋಗ್ಯ ಉತ್ತಮವಾಗಿಲ್ಲ ಮತ್ತು ಅವರು ಮಧುಮೇಹಿಯಾಗಿದ್ದಾರೆ. ಅವರು ಸತ್ತರೆ ನಾನು ಬಿಜೆಪಿ ಮತ್ತು ಈ.ಡಿ.ವಿರುದ್ಧ ಎಫ್ಐಆರ್ ದಾಖಲಿಸುತ್ತೇನೆ ’ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದರು. ಕೇಂದ್ರೀಯ ಏಜೆನ್ಸಿಗಳು ಪ್ರತಿಯೊಬ್ಬ ಸಚಿವರ ಮನೆಯ ಮೇಲೂ ದಾಳಿ ನಡೆಸುತ್ತಿದ್ದರೆ ಸರಕಾರವನ್ನು ಯಾರು ನಡೆಸುತ್ತಾರೆ ಎಂದು ಅವರು ಪ್ರಶ್ನಿಸಿದ್ದರು.