ಜಾರಿ ನಿರ್ದೇಶನಾಲಯವು ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕಾರಣವನ್ನು ನೀಡಬೇಕು: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈ.ಡಿ.)ವು ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಅವರಿಗೆ ಬಂಧನದ ಕಾರಣವನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಕಳೆದ ವರ್ಷದ ಅಕ್ಟೋಬರ್ನಲ್ಲಿ ನೀಡಿದ್ದ ತೀರ್ಪಿನ ಪುನರ್ಪರಿಶೀಲನೆಯನ್ನು ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.
‘ಪುನರ್ಪರಿಶೀಲನೆ ಅರ್ಜಿಗಳು ಮತ್ತು ಸಂಬಂಧಿತ ದಾಖಲೆಗಳನ್ನು ನಾವು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ’ ಎಂದು ಮಂಗಳವಾರ ವಿಚಾರಣೆ ಸಂದರ್ಭ ಹೇಳಿದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಸಂಜಯ ಕುಮಾರ್ ಅವರ ಪೀಠವು, ‘ತೀರ್ಪಿನ ಪುನರ್ಪರಿಶೀಲನೆಯನ್ನು ಅಗತ್ಯವಾಗಿಸುವ ಯಾವುದೇ ದೋಷಗಳು ಅದರಲ್ಲಿ ನಮಗೆ ಕಂಡುಬಂದಿಲ್ಲ’ ಎಂದು ಸ್ಪಷ್ಟಪಡಿಸಿತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯಡಿ ಈ.ಡಿ.ಯಿಂದ ಬಂಧನಕ್ಕೊಳಗಾದವರು ತಮ್ಮ ಬಂಧನಕ್ಕೆ ಕಾರಣಗಳನ್ನು ತಿಳಿದುಕೊಳ್ಳುವ ಸಾಂವಿಧಾನಿಕ ಮತ್ತು ಶಾಸನಬದ್ಧ ಹಕ್ಕನ್ನು ಹೊಂದಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ 2023, ಅ.3ರ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು. ಬಂಧನದ ಬಳಿಕ ಕಾಯ್ದೆಯ ಕಲಂ 45ರಡಿ ಜಾಮೀನಿಗಾಗಿ ಕಠಿಣ ಷರತ್ತುಗಳನ್ನು ಪೂರೈಸಬೇಕಾಗುವುದರಿಂದ ಆರೋಪಿಗಳು ತಮ್ಮ ಬಂಧನಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಅದು ಹೇಳಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿರುವ ಒ3ಒರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾದ ಪಂಕಜ ಬನ್ಸಾಲ್ ಮತ್ತು ಬಸಂತ ಬನ್ಸಾಲ್ ಅವರ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ಹೊರಡಿಸಿತ್ತು. ತಮ್ಮ ಬಂಧನವನ್ನು ರದ್ದುಗೊಳಿಸಲು ನಿರಾಕರಿಸಿದ್ದ ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಬನ್ಸಾಲ್ದ್ವಯರು ಪ್ರಶ್ನಿಸಿದ್ದರು. ಅವರ ಮೇಲ್ಮನವಿಗಳನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು.