ಇಡೀ ದೇಶಕ್ಕೆ ಎಂಎಸ್ಪಿ ಅಗತ್ಯವಿದೆ, ಪಂಜಾಬಿಗೆ ಮಾತ್ರವಲ್ಲ: ರೈತ ನಾಯಕ ದಲ್ಲೆವಾಲ್
ಜಗಜಿತ್ ಸಿಂಗ್ ದಲ್ಲೆವಾಲ್ | PTI
ಖನೌರಿ : ರೈತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಡ ಹೇರಲು ನ.26ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಂಜಾಬಿನ ಹಿರಿಯ ರೈತನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು, ಇದು ಕೇವಲ ಪಂಜಾಬಿನ ಹೋರಾಟವಲ್ಲ ಎಂಬ ಸಂದೇಶವನ್ನು ಕೇಂದ್ರಕ್ಕೆ ರವಾನಿಸಲು ಎಂಎಸ್ಪಿಗೆ ಕಾನೂನಾತ್ಮಕ ಖಾತರಿಗಾಗಿ ಬಲವಾದ ಆಂದೋಲನವನ್ನು ನಡೆಸುವಂತೆ ಇತರ ರಾಜ್ಯಗಳಲ್ಲಿಯ ರೈತ ಸಂಘಟನೆಗಳಿಗೆ ಶನಿವಾರ ಮನವಿ ಮಾಡಿಕೊಂಡಿದ್ದಾರೆ. ಇಡೀ ದೇಶಕ್ಕೆ ಎಂಎಸ್ಪಿಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಪಂಜಾಬ್ ಮತ್ತು ಹರ್ಯಾಣ ನಡುವಿನ ಗಡಿಕೇಂದ್ರ ಖನೌರಿಯಲ್ಲಿ ‘ಕಿಸಾನ ಮಹಾ ಪಂಚಾಯತ್’ನಲ್ಲಿ ತನ್ನ 11 ನಿಮಿಷಗಳ ಭಾಷಣದಲ್ಲಿ,ತನ್ನ ಜೀವವು ರೈತರಿಗಿಂತ ಮುಖ್ಯವಲ್ಲ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದರು.
ದೇಶದಲ್ಲಿ ಏಳು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಅವರ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ತನಗೆ ತಿಳಿದಿದೆ ಎಂದು ಅವರು ಹೇಳಿದರು.
70ರ ಹರೆಯದ ದಲ್ಲೆವಾಲ್ರನ್ನು ಸ್ಟ್ರೆಚರ್ನಲ್ಲಿ ಪ್ರತಿಭಟನಾ ಸ್ಥಳಕ್ಕೆ ತರಲಾಗಿದ್ದು, ಅವರು ವೇದಿಕೆಯಲ್ಲಿ ಹಾಸಿಗೆಯಲ್ಲಿ ಮಲಗಿಕೊಂಡೇ ರೈತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಎಂಎಸ್ಪಿಗೆ ಕಾನೂನಾತ್ಮಕ ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಪ್ರಸ್ತಾವಿಸಿದ ದಲ್ಲೆವಾಲ್, ‘ನಮ್ಮ ಮುಂದಿರುವ ಹೋರಾಟದ ಅಗಾಧತೆ ತನಗೆ ತಿಳಿದಿದೆ, ಆದರೆ ಏನೂ ಮಾಡದೇ ಸುಮ್ಮನೆ ಕುಳಿತಿರಬೇಕು ಎನ್ನುವುದು ಅದರ ಅರ್ಥವಲ್ಲ ’ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ)ದ ಸಂಚಾಲಕರಾಗಿರುವ ದಲ್ಲೆವಾಲ್ರ ಉಪವಾಸ ಸತ್ಯಾಗ್ರಹವು ಶನಿವಾರ 40ನೇ ದಿನಕ್ಕೆ ಕಾಲಿರಿಸಿದ್ದು,ಆರೋಗ್ಯ ಹದಗೆಟ್ಟಿದ್ದರೂ ಯಾವುದೇ ವೈದ್ಯಕೀಯ ನೆರವು ಪಡೆಯಲು ಅವರು ಈವರೆಗೆ ನಿರಾಕರಿಸುತ್ತಲೇ ಬಂದಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ದಲ್ಲೆವಾಲ್ ಕಿರು ವೀಡಿಯೊ ಸಂದೇಶಗಳ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಬಳಿಕ ಶನಿವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.