ಭಾರತ-ಅಮೆರಿಕ ಜಾಗತಿಕ ಸವಾಲುಗಳು ಸಂಸ್ಥೆ ಸ್ಥಾಪನೆ
83 ಕೋಟಿ ರೂ. ಆರಂಭಿಕ ಹೂಡಿಕೆಗೆ ಭಾರತ, ಅಮೆರಿಕ ನಿರ್ಧಾರ
ಜೋ ಬೈಡನ್ , ಮೋದಿ | Photo: PTI
ಹೊಸದಿಲ್ಲಿ: ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಹಭಾಗಿತ್ವದ ಕಾರ್ಯಕ್ರಮಗಳನ್ನು ಏರ್ಪಡಿಸುವುದಾಗಿ ಭಾರತ ಮತ್ತು ಅಮೆರಿಕ ಘೋಷಿಸಿವೆ. ಶುಕ್ರವಾರ ಸಂಜೆ ಹೊಸದಿಲ್ಲಿಯಲ್ಲಿ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಭಾರತೀಯ ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸುವ ಇಂಡಿಯನ್ ಇನ್ಸ್ಟಿಟ್ಯೂಟ್ಸ್ ಆಪ್ ಟೆಕ್ನಾಲಜಿ ಕೌನ್ಸಿಲ್ (ಐಐಟಿ ಕೌನ್ಸಿಲ್) ಮತ್ತು ಅಮೆರಿಕದ ವಿಶ್ವವಿದ್ಯಾನಿಲಯಗಳನ್ನು ಪ್ರತಿನಿಧಿಸುವ ಅಸೋಸಿಯೇಶನ್ ಆಫ್ ಅಮೆರಿಕನ್ ಯುನಿವರ್ಸಿಟೀಸ್ (ಎಎಯು), ಭಾರತ-ಅಮೆರಿಕ ಜಾಗತಿಕ ಸವಾಲುಗಳು ಸಂಸ್ಥೆ (ಇಂಡಿಯ-ಯುಎಸ್ ಗ್ಲೋಬಲ್ ಚಾಲೆಂಜಸ್ ಇನ್ಸ್ಟಿಟ್ಯೂಟ್) ಸ್ಥಾಪನೆಗೆ ಸಂಬಂಧಿಸಿದ ಒಪ್ಪಂದವನ್ನು ಮಾಡಿಕೊಂಡಿವೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಇದಕ್ಕಾಗಿ ಕನಿಷ್ಠ ಒಂದು ಕೋಟಿ ಡಾಲರ್ (ಸುಮಾರು 83 ಕೋಟಿ ರೂಪಾಯಿ) ಆರಂಭಿಕ ಹೂಡಿಕೆಯನ್ನು ಮಾಡುವುದಾಗಿ ಅವುಗಳು ತಿಳಿಸಿವೆ.
ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ದರ್ಜೆಯ ಅಧ್ಯಯನಕ್ಕಾಗಿ ಉಭಯ ದೇಶಗಳ ಪ್ರಮುಖ ಸಂಶೋಧನಾ ಮತ್ತು ಉನ್ನತ ಅಧ್ಯಯನ ಸಂಸ್ಥೆಗಳನ್ನು ಒಂದುಗೂಡಿಸುವ ಕೆಲಸವನ್ನು ಗ್ಲೋಬಲ್ ಚಾಲೆಂಜಸ್ ಇನ್ಸ್ಟಿಟ್ಯೂಟ್ ಮಾಡುತ್ತದೆ. ಈ ಕ್ಷೇತ್ರಗಳೆಂದರೆ- ಮರುಬಳಕೆ ಇಂಧನ, ಕೃಷಿ, ಆರೋಗ್ಯ, ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ, ಸೆಮಿಕಂಡಕ್ಟರ್ ತಂತ್ರಜ್ಞಾನ, ಸುಧಾರಿತ ಪದಾರ್ಥಗಳು, ದೂರಸಂಪರ್ಕಗಳು, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ವಿಜ್ಞಾನ.