ಗುಜರಾತ್ ನ ಮೂರು ಕೇಂದ್ರ ಕಾರಾಗೃಹಗಳಲ್ಲಿ ಕೈದಿಗಳಿಗೆ ಮಾನಸಿಕ-ಸಾಮಾಜಿಕ ಆರೈಕೆ ಕೇಂದ್ರಗಳ ಸ್ಥಾಪನೆ
ಸಾಬರಮತಿ ಕಾರಾಗೃಹದಲ್ಲಿ ಪ್ರಾರಂಭಿಸಿದ್ದ ಪ್ರಾಯೋಗಿಕ ಯೋಜನೆ ಯಶಸ್ವಿ
ಸಾಂದರ್ಭಿಕ ಚಿತ್ರ
ಗಾಂಧಿನಗರ: 2022ರಲ್ಲಿ ಅಹಮದಾಬಾದಿನ ಸಾಬರಮತಿ ಜೈಲಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ ಕೈದಿಗಳಿಗಾಗಿನ ಮಾನಸಿಕ-ಸಾಮಾಜಿಕ ಆರೈಕೆ ಕೇಂದ್ರಗಳನ್ನು ರಾಜಕೋಟ್, ಸೂರತ್ ಹಾಗೂ ವಡೋದರ ಕೇಂದ್ರ ಕಾರಾಗೃಹಗಳಲ್ಲೂ ಜಾರಿಗೊಳಿಸುವ ಉಪಕ್ರಮಕ್ಕೆ ಗುಜರಾತ್ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ ವಾಲ್ ಇಂದು (ಶನಿವಾರ) ವರ್ಚುಯಲ್ ವಿಧಾನದ ಮೂಲಕ ಚಾಲನೆ ನೀಡಿದರು. ಈ ಉಪಕ್ರಮದ ಅನ್ವಯ, ಕಾರಾಗೃಹದಲ್ಲಿರುವ ಕೈದಿಗಳಿಗೆ ಪುನರ್ವಸತಿ, ಪರಿವರ್ತನೆ ಹಾಗೂ ಮರು ಏಕೀಕರಣದಂಥ ಮನೋಸಾಮಾಜಿಕ ಆರೈಕೆಯನ್ನು ಒದಗಿಸಲಾಗುತ್ತದೆ ಎಂದು indianexpress.com ವರದಿ ಮಾಡಿದೆ.
ಈ ಉಪಕ್ರಮಕ್ಕೆ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗುಜರಾತ್ ಸರ್ಕಾರವು ಚಾಲನೆ ನೀಡಿದ್ದವು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಗುಜರಾತ್ ಹೈಕೋರ್ಟ್ ನ ನ್ಯಾ. ಬಿರೇನ್ ವೈಷ್ಣವ್, ಮನೋಸಾಮಾಜಿಕ ಆರೈಕೆ ಕೇಂದ್ರವನ್ನು ಪ್ರಥಮ ಬಾರಿಗೆ ಆಗಸ್ಟ್ 19, 2022ರಲ್ಲಿ ರಾಷ್ಟ್ರೀಯ ರಾಷ್ಟ್ರ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಲಾಗಿತ್ತು ಎಂದು ಹೇಳಿದರು.
ಈ ಉಪಕ್ರಮಕ್ಕೆ ಚಾಲನೆ ನೀಡಿದ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಕೊಂಡಾಡಿದ ನ್ಯಾ. ವೈಷ್ಣವ್, ಈ ಉಪಕ್ರಮದಿಂದಾಗಿ ಕೈದಿಗಳು ತಮ್ಮ ಭಾವನೆಗಳು ಹಾಗೂ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಹಾಯವಾಗಿದ್ದು, ಜೈಲಿನಲ್ಲಿರುವ ಕೈದಿಗಳ ಒಟ್ಟಾರೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಅನುಕೂಲಕರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ಉಪಕ್ರಮವನ್ನು ರಾಷ್ಟ್ರೀಯ ರಾಷ್ಟ್ರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲೂ ಅಳವಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ಸಂಜೀವ್ ಸಚ್ ದೇವ್ ಹಾಗೂ ಮನೋಜ್ ಕುಮಾರ್ ಒಹ್ರಿ ಕೂಡಾ ಪಾಲ್ಗೊಂಡಿದ್ದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸಂಜೀವ್ ಖನ್ನಾ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತಾದರೂ, ಪೂರ್ವನಿಗದಿತ ಕಾರ್ಯಕ್ರಮವಿದ್ದುದರಿಂದ ಅವರು ಪಾಲ್ಗೊಂಡಿರಲಿಲ್ಲ.