ನೈತಿಕ ಸಮಿತಿಯು ನಿಯಮವನ್ನು ಮುರಿದಿದೆ: ಉಚ್ಚಾಟನೆಗೊಂಡ ನಂತರ ಮಹುವಾ ಪ್ರತಿಕ್ರಿಯೆ
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ತಮ್ಮ ವಿರುದ್ಧದ “ಪ್ರಶ್ನೆಗಾಗಿ ನಗದು” ಪ್ರಕರಣದ ಕುರಿತು ತನಿಖೆ ನಡೆಸಿದ ಸದನದ ನೈತಿಕ ಸಮಿತಿಯು “ಪ್ರತಿಯೊಂದು ನಿಯಮವನ್ನು ಮುರಿದಿದೆ” ಎಂದು ಇಂದು ಸಮಿತಿ ವರದಿಯ ಆಧಾರದಲ್ಲಿ ಲೋಕಸಭೆಯಿಂದ ಉಚ್ಚಾಟನೆಗೊಂಡಿರುವ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
“ಸಮಿತಿ ಪ್ರತಿಯೊಂದು ನಿಯಮ ಉಲ್ಲಂಘಿಸಿದೆ… ನನಗೆ ಕಿರುಕುಳ ನೀಡಲು ನಾಳೆ ಸಿಬಿಐ ಅನ್ನು ನನ್ನ ಮನೆಗೆ ಕಳುಹಿಸಲಾಗುವುದು,”ಎಂದು ಸದನದ ಹೊರಗೆ ಉಪಸ್ಥಿತರಿದ್ದ ಪತ್ರಕರ್ತರ ಜೊತೆ ಮಾತನಾಡಿದ ಮಹುವಾ ಹೇಳಿದರು.
“ಲೋಕಸಭೆಯು ತನ್ನ 78 ಮಹಿಳಾ ಸಂಸದರ ಪೈಕಿ ಒಬ್ಬರನ್ನು, ಮೊದಲ ಬಾರಿಯ ಸಂಸದೆಯನ್ನು, ಯಾವುದೇ ರಾಜಕೀಯ ಇತಿಹಾಸವಿಲ್ಲದ ಸಂಸದೆಯ ವಿರುದ್ಧ ಕಾರ್ಯಾಚರಿಸಿದೆ,ಈ ಲೋಕಸಭೆಯು ಸಂಸದೀಯ ಸಮಿತಿಯನ್ನು ಅಸ್ತ್ರವಾಗಿ ಬಳಸಿದ್ದನ್ನೂ ನೋಡಿದೆ,” ಎಂದು ಮಹುವಾ ಹೇಳಿದರು.
“ಸದಸ್ಯರಿಗಾಗಿ ನೈತಿಕತೆ ಎತ್ತಿ ಹಿಡಿಯುವ ಕೆಲಸಕ್ಕಾಗಿ ರಚಿತವಾದ ಸಮಿತಿಯು ಅದು ಮಾಡುವಂತಹದ್ದಲ್ಲದ ಕೆಲಸವನ್ನು ಇಂದು ಮಾಡಿದೆ, ವಿಪಕ್ಷವನ್ನು ನೆಲಸಮಗೊಳಿಸುವುದು ಮತ್ತು ನಾವು ಅವರು ಹೇಳಿದಂತೆ ಕೇಳುವಂತೆ ಮಾಡಲು ಅದನ್ನು ಅಸ್ತ್ರವನ್ನಾಗಿಸಲಾಗಿದೆ,” ಎಂದು ವಿಪಕ್ಷ ಸಂಸದರ ಜೊತೆಗಿದ್ದ ಮಹುವಾ ಹೇಳಿದರು.