ಸ್ವತಃ ಬಿಜೆಪಿಯೇ ಆಹ್ವಾನಿಸಿದರೂ ಎನ್ ಡಿ ಎ ಸೇರುವುದಿಲ್ಲ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ | PC : PTI
ಮುಂಬೈ : ಸ್ವತಃ ಬಿಜೆಪಿಯೇ ಬಾಗಿಲು ತೆರೆದು ಸ್ವಾಗತಿಸಿದರೂ ತಾನು ಮತ್ತೆ ಎನ್ ಡಿ ಎ ಸೇರುವುದಿಲ್ಲ. ಬಿಜೆಪಿ 2022ರಲ್ಲಿ ತನ್ನ ಸರಕಾರವನ್ನು ದ್ರೋಹದಿಂದ ಉರುಳಿಸಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ರವಿವಾರ ಹೇಳಿದ್ದಾರೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಾಗ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಠಾಕ್ರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಭಾರತದಲ್ಲಿ ಪಟಾಕಿ ಸಿಡಿಯುತ್ತದೆ. ಚೀನಾದಲ್ಲಿ ಕೂಡ ಪಟಾಕಿ ಸಿಡಿಯುತ್ತದೆ. ಯಾಕೆಂದರೆ ಕೇಂದ್ರದಲ್ಲಿ ದುರ್ಬಲ ಸರಕಾರವಿರುತ್ತದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಪಾಕಿಸ್ತಾನ ಉತ್ಸುಕವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ಚುನಾವಣೆ ಸಂದರ್ಭ ಬಿಜೆಪಿ ಪಾಕಿಸ್ತಾನದ ಹೆಸರನ್ನು ಬಳಕಿಕೊಂಡು ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಪೂಂಛ್ ಶಂಕಿತ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿಗೆ ಭೇಟಿ ನೀಡುವುದಿಲ್ಲ. ಆದರೆ, ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಾರೆ ಎಂದರು.
ಅನಂತ್ನಾಗ್-ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಮೂರು ವಾರಗಳು ಬಾಕಿ ಇರುವಾಗ ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಶನಿವಾರ ಭಾರತೀಯ ವಾಯು ಪಡೆಯ ಬೆಂಗಾವಲು ವಾಹನಗಳ ಮೇಲೆ ಶಂಕಿತ ಭಯೋತ್ಪಾದಕರು ನಡೆಸಿದ ಹೊಂಚು ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದ ಹಾಗೂ ಇತರ ನಾಲ್ವರು ಗಾಯಗೊಂಡಿದ್ದರು.
‘‘ಒಂದು ವೇಳೆ ಬಾಗಿಲು ತೆರೆದರೂ ನೀವೇನು ಬಯಸುತ್ತಿರೋ ಅದನ್ನು ಮಾಡಿ. ನಾನು ನಿಮ್ಮ ಬಳಿ ಬರಲಾರೆ. ನೀವು ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ನಿಮ್ಮ ಬಳಿ ಹಿಂದಿರುಗುವ ಅಗತ್ಯ ಇಲ್ಲ’’ ಎಂದ ಠಾಕ್ರೆ ಹೇಳಿದರು.
ಕಳೆದ ವಾರ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಪುತ್ರರಾಗಿರುವುದರಿಂದ ಉದ್ಧವ್ ಠಾಕ್ರೆ ಅವರಿಗೆ ನಾನು ಗೌರವ ನೀಡುತ್ತೇನೆ ಎಂದು ಹೇಳಿದ್ದರು.