ಬಿಜೆಪಿಯ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಘಟಾನುಘಟಿಗಳು
ಅಮಿತ್ ಶಾ,ರಾಜ್ ನಾಥ್ ಸಿಂಗ್, ಸ್ಮೃತಿ ಇರಾನಿ | Photo: PTI
ಹೊಸ ದಿಲ್ಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ 370 ಸೀಟುಗಳಲ್ಲಿ ಜಯಭೇರಿ ಬಾರಿಸುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಬಿಜೆಪಿಯು, 195 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಚುನಾವಣಾ ಘೋಷಣೆಗೂ ಮುನ್ನವೇ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 34 ಕೇಂದ್ರ ಸಚಿವರ ಹೆಸರುಗಳೂ ಕಾಣಿಸಿಕೊಂಡಿವೆ.
2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಥಮ ಪಟ್ಟಿಯಲ್ಲಿ ಅಭ್ಯರ್ಥಿಗಳಾಗಿರುವ ಘಟನಾನುಘಟಿಗಳ ಹೆಸರು ಹೀಗಿದೆ:
ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉತ್ತರ ಪ್ರದೇಶದ ವಾರಾಣಸಿಯಿಂದಲೇ ಸ್ಪರ್ಧಿಸಲಿದ್ದಾರೆ. ಅವರು ಈಗಾಗಲೇ ಈ ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣು ನೆಟ್ಟಿದ್ದಾರೆ.
2014ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರನ್ನು ಪರಾಭವಗೊಳಿಸಿದ್ದ ಪ್ರಧಾನಿ ಮೋದಿ, 2019ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಎದುರು ಗೆಲುವು ಸಾಧಿಸಿದ್ದರು.
ಅಮಿತ್ ಶಾ
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರಿ ಬಹುಮತದ ಗೆಲುವಿನತ್ತ ಮುನ್ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಬಾರಿ ಗುಜರಾತ್ ನ ಗಾಂಧಿನಗರದಿಂದ ಸ್ಪರ್ಧಿಸಲಿದ್ದಾರೆ.
ರಾಜ್ ನಾಥ್ ಸಿಂಗ್
ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಕ್ನೊದಿಂದ ಸ್ಪರ್ಧಿಸಲಿದ್ದಾರೆ.
ಸ್ಮೃತಿ ಇರಾನಿ
2019ರ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿ ಎದುರು ಗೆಲುವು ಸಾಧಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಮತ್ತೊಮ್ಮೆ ಉತ್ತರ ಪ್ರದೇಶದ ಈ ಪ್ರತಿಷ್ಠಿತ ಕ್ಷೇತ್ರದಿಂದ ಕಣಕ್ಕಿಳಿಸಲಾಗುತ್ತಿದೆ.
ಜ್ಯೋತಿರಾದಿತ್ಯ ಸಿಂಧ್ಯಾ
2002ರವರೆಗೆ ಮಧ್ಯಪ್ರದೇಶದ ಗುನಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಾಗೂ 2019ರಲ್ಲಿ ಬಿಜೆಪಿಯ ಕೃಷ್ಣ ಪಾಲ್ ಸಿಂಗ್ ಎದುರು ಪರಾಭವಗೊಂಡಿದ್ದ ರಾಜ್ಯಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಈ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್
ಕಳೆದ ವರ್ಷ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೂ ಮುಖ್ಯಮಂತ್ರಿಯಾಗುವಲ್ಲಿ ವಿಫಲವಾಗಿದ್ದ ಶಿವರಾಜ್ ಸಿಂಗ್ ಚೌಹಾಣ್, ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದಂತೆ ತೋರುತ್ತಿದ್ದು, ವಿದಿಶಾ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ.
ಕಿರಣ್ ರಿಜಿಜು
ಭೂವಿಜ್ಞಾನಗಳು ಖಾತೆಯನ್ನು ಹೊಂದಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಪಶ್ಚಿಮ ಅರುಣಾಚಲ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2019ರಲ್ಲಿ ಎರಡನೆ ಬಾರಿ ಬಿಜೆಪಿ ಅಧಿಕಾರಕ್ಕೆ ಮರಳಿದಾಗಿನಿಂದ, ರಿಜಿಜು ಕಾನೂನು ಮತ್ತು ಯುವಜನ ವ್ಯವಹಾರಗಳಂಥ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.
ರಾಜೀವ್ ಚಂದ್ರಶೇಖರ್
ಕಾಂಗ್ರೆಸ್ ಪಕ್ಷದ ಶಶಿ ತರೂರ್ ಪ್ರತಿನಿಧಿಸುತ್ತಿರುವ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮರು ನಾಮಕರಣಗೊಂಡಿರದಿದ್ದ ಹಲವಾರು ಸಚಿವರ ಪೈಕಿ ರಾಜೀವ್ ಚಂದ್ರಶೇಖರ್ ಕೂಡಾ ಒಬ್ಬರಾಗಿದ್ದು, ನಾನು ನನ್ನ ಪ್ರಥಮ ಲೋಕಸಭಾ ಚುನಾವಣೆ ಎದುರಿಸುವ ಸಾಧ್ಯತೆ ಇದ್ದು, ಇದು ನನ್ನ ರಾಜಕೀಯ ವೃತ್ತಿಜೀವನದಲ್ಲಿ ಮತ್ತಷ್ಟು ರೋಚಕ ಹಂತವಾಗಿದೆ ಎಂದು PTI ಸುದ್ದಿ ಸಂಸ್ಥೆಗೆ ಅವರು ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು.
ಹೇಮಾ ಮಾಲಿನಿ
ನಟಿ, ರಾಜಕಾರಣಿ ಹೇಮಾಮಾಲಿನಿಯನ್ನು ಮತ್ತೆ ಮಥುರಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. 2014 ಹಾಗೂ 2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿಯೂ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಈ ಹಿರಿಯ ನಟಿ ಜಯಭೇರಿ ಬಾರಿಸಿದ್ದರು.
ಭೂಪೇಂದ್ರ ಯಾದವ್
ಎರಡು ದಶಕಗಳ ಕಾಲ ಪಕ್ಷದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಬಿಜೆಪಿಯ ಘಟಾನುಘಟಿ ನಾಯಕ ಭೂಪೇಂದ್ರ ಯಾದವ್ ಇದೇ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಸಮಸ್ಯೆಗಳನ್ನು ನಾಜೂಕಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಭೂಪೇಶ್ ಯಾದವ್ ರಾಜಸ್ಥಾನದ ಅಲ್ವಾರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ವಿವಾದಾತೀತ ಬಿಜೆಪಿ ನಾಯಕರಾಗಿದ್ದಾರೆ.