ಕೇರಳದಲ್ಲಿ ಬಿಜೆಪಿಗೆ ಇವಿಎಂ ನೆರವು: ವರದಿಗಳನ್ನು ತಳ್ಳಿಹಾಕಿದ ಆಯೋಗ
Photo: PTI
ಹೊಸದಿಲ್ಲಿ: ಕೇರಳದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳ ಮೊದಲು ನಡೆದ ಅಣಕು ಮತದಾನದಲ್ಲಿ ಇವಿಎಂಗಳಲ್ಲಿ ದೋಷಯುಕ್ತವಾಗಿ ಬಿಜೆಪಿ ಪರವಾಗಿ ಮತಗಳು ಚಲಾವಣೆಯಾಗಿವೆ ಎಂಬ ವರದಿಗಳನ್ನು ಭಾರತದ ಚುನಾವಣಾ ಆಯೋಗ ಗುರುವಾರ ತಳ್ಳಿಹಾಕಿದೆ.
ಇದುವರೆಗೆ ಇವಿಎಂ ಹಾಗೂ ವಿವಿಪ್ಯಾಟ್ ನಡುವಿನ ಎಣಿಕೆ ಮಾಡಿದಾಗ ಹೊಂದಾಣಿಕೆಯಾಗದ ಏಕೈಕ ನಿದರ್ಶನ 2019ರಲ್ಲಿ ಮಾತ್ರ ನಡೆದಿದ್ದು, ಇದು ಕೂಡಾ ಸಿಬ್ಬಂದಿ ದೋಷದಿಂದ ಸಂಭವಿಸಿತ್ತು ಎಂದು ಸುಪ್ರೀಂಕೋರ್ಟ್ ನಲ್ಲಿ ಪ್ರತಿಪಾದಿಸಿದೆ.
ಈ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಕೇರಳದ ಲೋಪವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ, ಇದನ್ನು ದೃಢೀಕರಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಭೋಜನ ವಿರಾಮದ ಬಳಿಕ ಚುನಾವಣಾ ಆಯೋಗ ಮಾಹಿತಿ ನೀಡಿ, ಈ ಕುರಿತ ವರದಿಗಳು ಸುಳ್ಳು ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲು ಅಸಾಧ್ಯ ಎನ್ನುವುದನ್ನು ಕೋರ್ಟ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿತು.
ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರು, "ವಿವಿ ಪ್ಯಾಟ್ ಗಳನ್ನು ಆರಂಭಿಸಿದ ಬಳಿಕ 118 ಕೋಟಿ ಮತಗಳನ್ನು ಮತದಾರರು ಸಂಪೂರ್ಣ ಸಮಾಧಾನದಿಂದ ಮತ ಚಲಾಯಿಸಿದ್ದಾರೆ ಹಾಗೂ ಸುಮಾರು 4 ಕೋಟಿ ವಿವಿ ಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಲಾಗಿದ್ದು, ಕೇವಲ 25 ದೂರುಗಳನ್ನು ಮಾತ್ರ 49ಎಂಎ ನಿಯಮಗಳ ಅಡಿಯಲ್ಲಿ ಸ್ವೀಕರಿಸಲಾಗಿದೆ. ಇದು ಎಲ್ಲವೂ ಸುಳ್ಳು ಎಂದು ಕಂಡುಬಂದಿದೆ. ಈ ನಿಯಮದ ಅನ್ವಯ ಮತದಾರರು ಇವಿಎಂ ಹಾಗೂ ಪೇಪರ್ ಟ್ರಯಲ್ ಮಿಷಿನ್ ಗಳಲ್ಲಿ ಸರಿಯಾಗಿ ತನ್ನ ಮತ ಚಲಾವಣೆಯಾಗಿಲ್ಲ ಎಂದು ದೂರು ನೀಡಲು ಅವಕಾಶವಿದೆ" ಎಂದು ವಿವರಿಸಿದರು.
"ಇದುವರೆಗೆ 38156 ವಿವಿಪ್ಯಾಟ್ ಯಂತ್ರಗಳನ್ನು ತಾಳೆ ಮಾಡಿಸಲಾಗಿದೆ. ಆದರೆ ಎ ಅಭ್ಯರ್ಥಿಗೆ ನೀಡಿದ ಮತಗಳು ಬಿ ಅಭ್ಯರ್ಥಿಗೆ ಚಲಾವಣೆಯಾದ ಒಂದು ನಿದರ್ಶನವೂ ಇಲ್ಲ ಎಂದು ಹೇಳಿದರು.