ಛತ್ತೀಸ್ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ನಿವಾಸ ಸೇರಿದಂತೆ 14 ಸ್ಥಳಗಳ ಮೇಲೆ ED ದಾಳಿ

ಭೂಪೇಶ್ ಬಘೇಲ್ (Photo: PTI)
ಭೋಪಾಲ್: ಬಹುಕೋಟಿ ಅಬಕಾರಿ ಹಗರಣಕ್ಕೆ ಸಂಬಂಧಿಸಿ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರ ಭಿಲಾಯಿ ನಗರದಲ್ಲಿರುವ ನಿವಾಸ ಸೇರಿದಂತೆ ಹಲವೆಡೆ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ದುರ್ಗ್ ಜಿಲ್ಲೆಯಲ್ಲಿ ಬಘೇಲ್ ಅವರಿಗೆ ಸಂಬಂಧಿಸಿದ ಕನಿಷ್ಠ 14 ಸ್ಥಳಗಳಲ್ಲಿ ಈಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಚೈತನ್ಯ ಬಘೇಲ್ ಅವರ ಆಪ್ತರ ನಿವಾಸದ ಮೇಲೆ ಕೂಡ ದಾಳಿ ನಡೆಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಭೂಪೇಶ್ ಬಘೇಲ್, ಏಳು ವರ್ಷಗಳಿಂದ ನಡೆಯುತ್ತಿದ್ದ ಸುಳ್ಳು ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ ನಂತರ, ಈಡಿ ಅಧಿಕಾರಿಗಳು ಸೋಮವಾರ ಭಿಲಾಯ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಪಿತೂರಿಯ ಮೂಲಕ ಪಂಜಾಬ್ನಲ್ಲಿ ಕಾಂಗ್ರೆಸ್ ಅನ್ನು ತಡೆಯಲು ಯಾರಾದರೂ ಪ್ರಯತ್ನಿಸುತ್ತಿದ್ದರೆ, ಅದು ಅವರ ತಪ್ಪು ತಿಳುವಳಿಕೆಯಾಗಿದೆ ಎಂದು ಹೇಳಿದರು.