ಮುಂಬೈ: ಸೈಕ್ಲಿಂಗ್ ಮಾಡುವಾಗ ಕ್ಯಾಬ್ ಢಿಕ್ಕಿಯಾಗಿ ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ನಿಧನ
ಅವತಾರ್ ಸೈನಿ (Photo:X/@Mumbaikhabar9)
ನವಿ ಮುಂಬೈ: ತಮ್ಮ ಸ್ನೇಹಿತರೊಂದಿಗೆ ಸೈಕ್ಲಿಂಗ್ ಮಾಡಲು ತೆರಳಿದ್ದ ಪ್ರತಿಷ್ಠಿತ ಚಿಪ್ ವಿನ್ಯಾಸಕಾರ ಅವತಾರ್ ಸೈನಿ ಅವರಿಗೆ ಕ್ಯಾಬ್ ಒಂದು ಢಿಕ್ಕಿ ಹೊಡೆದಿದ್ದರಿಂದ, ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ನೆರೂಲ್ ನ ಪಾಲ್ ಬೀಚ್ ರಸ್ತೆಯಲ್ಲಿ ನಡೆದಿದೆ. 68 ವರ್ಷದ ಸೈನಿ ಇಂಟೆಲ್ ಇಂಡಿಯಾದ ಮಾಜಿ ಮುಖ್ಯಸ್ಥರೂ ಆಗಿದ್ದರು. ಅವರು ಇಂಟೆಲ್ 386 ಹಾಗೂ ಇಂಟೆಲ್ 486 ಮೈಕ್ರೊಪ್ರೊಸೆಸರ್ ಗಳನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಪೆಂಟಿಯಮ್ ಪ್ರೊಸೆಸರ್ ಅನ್ನು ವಿನ್ಯಾಸಗೊಳಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಬುಧವಾರ ಮುಂಜಾನೆ 5.50ರ ವೇಳೆ ಸೈನಿ ಅವರಿಗೆ ಕ್ಯಾಬ್ ಒಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಅವರನ್ನು ಕೂಡಲೇ ಡಿ.ವೈ.ಪಾಟೀಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಸೈನಿ ಅವರ ಸೈಕಲ್ ಗೆ ಕ್ಯಾಬ್ ಢಿಕ್ಕಿ ಹೊಡೆದಾಗ ಸೈಕಲ್ ನಿಂದ ರಸ್ತೆಗೆ ಜಾರಿ ಬಿದ್ದ ಅವರಿಗೆ ತೀವ್ರ ಸ್ವರೂಪದ ಗಾಯವಾಯಿತು ಎಂದು ಅವರೊಂದಿಗೆ ತೆರಳುತ್ತಿದ್ದ ಹವ್ಯಾಸಿ ಸೈಕ್ಲಿಸ್ಟ್ ಗುಂಪು ಹೇಳಿದೆ.
ಸೈಕಲ್ ಗೆ ಗುದ್ದಿದ ಕ್ಯಾಬ್ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಆತನನ್ನು ಬೆನ್ನಟ್ಟಿ ಬೇಲಾಪುರ ಬಳಿಯಿರುವ ನವಿ ಮುಂಬೈ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಬಳಿ ಹಿಡಿದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.