ʼಖೇಲಾ ಹೋಬೆ ಅಭಿಯಾನʼದ ರೂವಾರಿ ದೇಬಾಂಶುವನ್ನು ಮಾಜಿ ನ್ಯಾಯಾಧೀಶರ ವಿರುದ್ಧ ಕಣಕ್ಕಿಳಿಸಿದ ಟಿಎಂಸಿ
Photo: ndtv
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಲುಕ್ ಕ್ಷೇತ್ರ ಸಾಕಷ್ಟು ಆಸಕ್ತಿ ಹುಟ್ಟಿಸಿದೆ. ಇಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕೊಲ್ಕತ್ತಾ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಕಣಕ್ಕಿಳಿಸಿದ್ದರೆ, ಆಡಳಿತ ತೃಣಮೂಲ ಕಾಂಗ್ರೆಸ್ ಪಕ್ಷವು ತನ್ನ ಸೋಶಿಯಲ್ ಮೀಡಿಯಾ ಸೆಲ್ ಮುಖ್ಯಸ್ಥ ಯುವ ನಾಯಕ ದೇಬಾಂಶು ಭಟ್ಟಾಚಾರ್ಯ ಅವರನ್ನು ಕಣಕ್ಕಿಳಿಸಿದೆ. 2021 ರಲ್ಲಿ ನಡೆದ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ಜನಪ್ರಿಯತೆ ಪಡೆದ ʼಖೇಲಾ ಹೋಬೆ ಅಭಿಯಾನʼ ಆರಂಭಿಸಿದ ಶ್ರೇಯ 27 ವರ್ಷದ ಭಟ್ಟಾಚಾರ್ಯ ಅವರದ್ದಾಗಿದೆ.
ಮಾಜಿ ನ್ಯಾಯಾಧೀಶ 61 ವರ್ಷದ ಗಂಗೋಪಾಧ್ಯಾಯ ಅವರನ್ನು ಪಶ್ಚಿ ಬಂಗಾಳ ಸೀಎಂ ಮಮತಾ ಬ್ಯಾನರ್ಜಿ “ಪೀಠದಲ್ಲಿ ಕುಳಿತುಕೊಳ್ಳುತ್ತಿದ್ದ ಬಿಜೆಪಿ ಬಾಬು” ಎಂದು ಬಣ್ಣಿಸಿದ್ದರು. ಶಿಕ್ಷಕರ ನೇಮಕಾತಿ ಹಗರಣದಲ್ಲಿ ಗಂಗೋಪಾಧ್ಯಾಯ ನೀಡಿದ್ದ ತೀರ್ಪುಗಳ ಹಿಂದೆ ರಾಜಕೀಯ ದುರುದ್ದೇಶವಿತ್ತು ಎಂದೂ ಟಿಎಂಸಿ ಆರೋಪಿಸಿದೆ.
ಅವರ ವಿರುದ್ಧ ಸ್ಪರ್ಧಿಸುತ್ತಿರುವ ಭಟ್ಟಾಚಾರ್ಯ ವಿದ್ಯಾರ್ಥಿ ಜೀವನದಲ್ಲಿ ತೃಣಮೂಲ ಛಾತ್ರಾ ಪರಿಷದ್ ಸದಸ್ಯರಾಗಿದ್ದರು. 2022ರಿಂದ ಪಕ್ಷದ ಸೋಶಿಯಲ್ ಮೀಡಿಯಾ ಘಟಕದಲ್ಲಿದ್ದಾರೆ.
ಒಂದು ಕಾಲದಲ್ಲಿ ಎಡಪಕ್ಷಗಳ ಭದ್ರಕೋಟೆಯಾಗಿದ್ದ ತಮ್ಲುಕ್ 2009ರಿಂದ ಟಿಎಂಸಿ ತೆಕ್ಕೆಯಲ್ಲಿದೆ. ಇಲ್ಲಿ 2009 ಹಾಗೂ 2014 ಲೋಕಸಭಾ ಚುನಾವಣೆಯಲ್ಲಿ ಇದೀಗ ಬಿಜೆಪಿಯಲ್ಲಿರುವ ಮಾಜಿ ಟಿಎಂಸಿ ಮುಖಂಡ ಸುವೇಂದು ಅಧಿಕಾರಿ ಜಯ ಗಳಿಸಿದ್ದರು. 2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಸುವೇಂದು ಈ ಕ್ಷೇತ್ರ ತೊರೆದಿದ್ದರು. ಉಪಚುನಾವಣೆಯಲ್ಲಿ ಅವರ ಸೋದರ ದಿವ್ಯೇಂದು ಅಧಿಕಾರಿ ಜಯ ಗಳಿಸಿದ್ದರು. 2019 ಚುನಾವಣೆಯಲ್ಲೂ ಟಿಎಂಸಿ ದಿವ್ಯೇಂದು ಅವರನ್ನು ಕಣಕ್ಕಿಳಿಸಿತ್ತು ಹಾಗೂ ಅವರು ಜಯ ಗಳಿಸಿದ್ದರು. ಮುಂದಿನ ವರ್ಷ ಸುವೇಂದು ಬಿಜೆಪಿ ಸೇರಿದ್ದರು. ಇದೀಗ ಅವರ ಸೋದರ ದಿವ್ಯೇಂದು ಒಂದು ವಾರದ ಹಿಂದೆ ಬಿಜೆಪಿ ಸೇರಿದ್ದಾರೆ.