ಕೋವಿಡ್ ನಿಯಮ ಉಲ್ಲಂಘನೆ: ಉತ್ತರ ಪ್ರದೇಶದ ಮಾಜಿ ಶಾಸಕನಿಗೆ 2 ವರ್ಷ ಜೈಲು
ಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ Photo: twitter.com/Shribha36648437
ಮೀರಠ್: ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಆರೋಪದಲ್ಲಿ ಮಾಜಿ ಶಾಸಕ ಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ ಗೆ ಎರಡು ವರ್ಷ ಐದು ತಿಂಗಳು ಜೈಲು ಶಿಕ್ಷೆ ಮತ್ತು 25,500 ರೂಪಾಯಿ ದಂಡ ವಿಧಿಸಿ ಬುಲಂದ್ಶಹರ್ ಎಂಪಿ/ಎಂಎಲ್ಎ ಕೋರ್ಟ್ ತೀರ್ಪು ನೀಡಿದೆ.
"2020ರ ಮೇ 11ರಂದು ಪಂಡಿತ್ ತಮ್ಮ ಬುಲಂದ್ಶಹರ್ ಮನೆಯ ಮುಂದೆ ಆಹಾರ ವಿತರಣೆ ಮಾಡುವ ಉದ್ದೇಶದಿಂದ ಗುಂಪು ಸೇರಿಸಿದ್ದರು. ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಫೇಸ್ ಬುಕ್ ಖಾತೆಯಲ್ಲಿ ಈ ನೋಟಿಸ್ ಪೋಸ್ಟ್ ಮಾಡಿದ ಅವರು, ಸತ್ಯವನ್ನು ಮುಚ್ಚಿಟ್ಟು ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದರು" ಎಂದು ವಿಶೇಷ ಸರ್ಕಾರಿ ಅಭಿಯೋಜಕ ಹಿತೇಂದ್ರ ವರ್ಮಾ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂಡಿತ್ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 188, 420 ಮತ್ತು ಉತ್ತರಪ್ರದೇಶ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಇತರ ಆರೋಪಗಳಲ್ಲಿ ಕೂಡಾ ಪಂಡಿತ್ ಅವರನ್ನು ತಪ್ಪಿತಸ್ಥ ಎಂದು ನಿರ್ಧರಿಸಿದ ನ್ಯಾಯಾಧೀಶರಾದ ವಿನಯ್ ಕುಮಾರ್ ಸಿಂಗ್, ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವರ್ಮಾ ವಿವರಿಸಿದ್ದಾರೆ.
"ಪೋಷಕರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ, ಮನುಷ್ಯರ ಬದುಕು ಸೋಂಕಿನಿಂದಾಗಿ ಅಂತ್ಯವಾಗಿತ್ತು. ಆರೋಪಿಯ ಬೇಜವಾಬ್ದಾರಿಯುತ ನಡವಳಿಕೆಯಿಂದಾಗಿ ಎಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸುವುದು ಕಷ್ಟಸಾಧ್ಯ" ಎಂದು ತೀರ್ಪಿನಲ್ಲಿ ಹೇಳಲಾಗಿದೆ.