ಪರೀಕ್ಷಾ ಪೆ ಚರ್ಚಾ | ಸವಾಲುಗಳಿಗೆ ಒಡ್ಡಿಕೊಳ್ಳಿ, ಆದರೆ ಪರೀಕ್ಷೆಯ ಒತ್ತಡಕ್ಕೆ ಸಿಲುಕಬೇಡಿ:ವಿದ್ಯಾರ್ಥಿಗಳಿಗೆ ಪ್ರಧಾನಿ ಕಿವಿಮಾತು

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ವಾರ್ಷಿಕ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಎಂಟನೇ ಆವೃತ್ತಿ ಸೋಮವಾರ ಪ್ರಸಾರಗೊಂಡಿದ್ದು, ಪೌಷ್ಟಿಕಾಂಶ, ಒತ್ತಡ ನಿಯಂತ್ರಣ ಮತ್ತು ನಾಯಕತ್ವದಂತಹ ಹಲವಾರು ವಿಷಯಗಳ ಕುರಿತು ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
‘ಜ್ಞಾನ’ ಮತ್ತು ‘ಪರೀಕ್ಷೆ’ ಇವೆರಡೂ ವಿಭಿನ್ನ ವಿಷಯಗಳಾಗಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಮೋದಿ,ಪರೀಕ್ಷೆಗಳೇ ಜೀವನದಲ್ಲಿ ಎಲ್ಲವೂ ಅಲ್ಲ ಮತ್ತು ಅಂತ್ಯವೂ ಅಲ್ಲ ಎಂದು ಹೇಳಿದರು.
ದೇಶಾದ್ಯಂತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳೊಂದಿಗೆ ಉತ್ಸಾಹ ಭರಿತ ಸಂವಾದದಲ್ಲಿ ಮೋದಿ,ಮಕ್ಕಳನ್ನು ಪುಸ್ತಕಗಳಿಗೆ ಸೀಮಿತಗೊಳಿಸಬಾರದು ಮತ್ತು ಅವರು ತಮ್ಮ ಆಸಕ್ತಿಗಳನ್ನು ಅನ್ವೇಷಿಸಲು ಅವಕಾಶ ನೀಡಬೇಕು ಎಂದು ಹೇಳಿದರು. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಮ್ಮ ಸಮಯವನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸೂಚಿಸಿದರು.
ನಿಮ್ಮ ಸಮಯದ ಮೇಲೆ ಹಿಡಿತ ಸಾಧಿಸಿ,ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸಿ,ಈ ಕ್ಷಣ ನಿಮ್ಮದು ಎಂದುಕೊಂಡು ಜೀವಿಸಿ,ಸಕಾರಾತ್ಮಕ ಅಂಶಗಳನ್ನು ಕಂಡುಕೊಳ್ಳಿ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಪ್ರಧಾನಿಯವರನ್ನು ಪ್ರಶ್ನಿಸಿದರು.
ಈ ಸಲ ಸಾಂಪ್ರದಾಯಿಕ ಟೌನ್ಹಾಲ್ ಮಾದರಿಯ ಬದಲಾಗಿ ಹೆಚ್ಚು ಅನೌಪಚಾರಿಕ ವಾತಾವರಣಕ್ಕೆ ಆದ್ಯತೆ ನೀಡಿದ್ದ ಮೋದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು 35 ಮಕ್ಕಳನ್ನು ದಿಲ್ಲಿಯ ಸುಂದರ್ ನರ್ಸರಿಗೆ ಕರೆದೊಯ್ದು ಹೆಚ್ಚು ಆಳವಾಗಿ ಮತ್ತು ಮುಕ್ತವಾಗಿ ಅವರೊಂದಿಗೆ ಸಂವಾದ ನಡೆಸಿದರು.
ತಮ್ಮ ಮಕ್ಕಳನ್ನು ಪ್ರದರ್ಶನದ ಮಾಡೆಲ್ಗಳನ್ನಾಗಿ ಬಳಸದಂತೆ ಪೋಷಕರನ್ನು ಒತ್ತಾಯಿಸಿದ ಮೋದಿ,ಅವರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸಬಾರದು, ಬದಲಿಗೆ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.
ಉತ್ತಮ ನಿದ್ರೆಯ ಮಹತ್ವವನ್ನು ಎತ್ತಿ ತೋರಿಸಿದ ಪ್ರಧಾನಿ,ಹೆಚ್ಚಿನ ಅಂಕಗಳನ್ನು ಗಳಿಸದಿದ್ದರೆ ತಮ್ಮ ಜೀವನವೇ ಹಾಳಾಗುತ್ತದೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು ಎಂದು ಒತ್ತಿ ಹೇಳಿದರು.
ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗದ್ದಲದ ನಡುವೆ ಬ್ಯಾಟರ್ಗಳು ಮಾಡುವಂತೆ ವಿದ್ಯಾರ್ಥಿಗಳು ಒತ್ತಡವನ್ನು ನಿಭಾಯಿಸಬೇಕು,ಅವರು ಬೌಂಡರಿಗಳಿಗೆ ಬೇಡಿಕೆಗಳನ್ನು ಕಡೆಗಣಿಸಿ ಮುಂದಿನ ಎಸೆತದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ ಎಂದ ಮೋದಿ,ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನವನ್ನು ಹರಿಸಬೇಕು ಮತ್ತು ಪರೀಕ್ಷೆಗಳಿಂದ ಒತ್ತಡಕ್ಕೊಳಗಾಗಬಾರದು ಎಂದರು.
ಆದಾಗ್ಯೂ,ನಿಮಗೆ ನೀವೇ ಸವಾಲು ಒಡ್ಡಿಕೊಳ್ಳಿ ಮತ್ತು ಹಿಂದಿನದಕ್ಕಿಂತ ಉತ್ತಮ ಫಲಿತಾಂಶವನ್ನು ಸಾಧಿಸಲು ಪ್ರಯತ್ನಿಸಿ ಎಂದು ಮೋದಿ ವಿದ್ಯಾರ್ಥಿಗಳಿಗೆ ಹೇಳಿದರು.
ಪೌಷ್ಟಿಕ ಆಹಾರ ಸೇವನೆ ಮತ್ತು ಧ್ಯಾನದ ಅಗತ್ಯವನ್ನೂ ಅವರು ಒತ್ತಿ ಹೇಳಿದರು.
ನಾಯಕತ್ವ ವಿಷಯದ ಕುರಿತು ಮಾತನಾಡಿದ ಪ್ರಧಾನಿ,ಜನರು ನಾಯಕರ ನಡವಳಿಕೆಯಿಂದ ಪ್ರೇರೇಪಣೆ ಪಡೆದುಕೊಳ್ಳುತ್ತಾರೆ ಮತ್ತು ಕೇವಲ ಭಾಷಣಗಳು ಸಹಾಯ ಮಾಡುವುದಿಲ್ಲ ಎಂದರು.
ಈ ವರ್ಷದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ವಿವಿಧ ಕಂತುಗಳಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಬಾಕ್ಸರ್ ಎಂಸಿ ಮೇರಿ ಕೋಮ್ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ ಅವರಂತಹ ಗಣ್ಯರು ಜೀವನದ ಪ್ರಮುಖ ಅಂಶಗಳು ಮತ್ತು ಕಲಿಕೆಯ ಕುರಿತು ತಮ್ಮ ಅನುಭವಗಳು ಮತ್ತು ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.