ಮರಣದಂಡನೆ ಪ್ರಕರಣದಲ್ಲಿ ಅತಿಯಾದ ವಿಳಂಬವು ಶಿಕ್ಷೆಯನ್ನು ತಗ್ಗಿಸಲು ಕಾರಣವಾಗುತ್ತದೆ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಕೈದಿಯ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ಬಳಿಕ ಮರಣ ದಂಡನೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ಅತಿಯಾದ ಮತ್ತು ವಿವೇಚನಾರಹಿತ ವಿಳಂಬವು ಸಂವಿಧಾನದ ವಿಧಿ 21ರಡಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ನ್ಯಾಯಾಲಯವು ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಲು ಕಾರಣವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಅತಿಯಾದ ವಿಳಂಬಕ್ಕೆ ಸಂಬಂಧಿಸಿದಂತೆ ಯಾವುದೇ ಕಠಿಣ ಮತ್ತು ತ್ವರಿತ ನಿಯಮವನ್ನು ಹೇರಲು ಸಾಧ್ಯವಿಲ್ಲ, ಏಕೆಂದರೆ ಅದು ಪ್ರಕರಣದಲ್ಲಿಯ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ನಿರ್ದಿಷ್ಟ ಪ್ರಕರಣವೊಂದರಲ್ಲಿ ಎರಡು ವರ್ಷಗಳ ವಿಳಂಬವು ಹಾನಿಕಾರಕವಲ್ಲದಿರಬಹುದು. ಬೇರೊಂದು ಪ್ರಕರಣದಲ್ಲಿ ಆರು ತಿಂಗಳ ವಿಳಂಬವೂ ಶಿಕ್ಷೆಯನ್ನು ತಗ್ಗಿಸಲು ಕಾರಣವಾಗಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎ.ಜಿ.ಮಸಿಹ್ ಅವರ ಪೀಠವು ಹೇಳಿತು.
ಮರಣ ದಂಡನೆಗೆ ಗುರಿಯಾದ ಕೈದಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಆತನನ್ನು ಸುದೀರ್ಘ ಕಾಲ ಸಾವಿನ ಭೀತಿಯಲ್ಲಿ ನರಳಿಸುವಂತಿಲ್ಲ. ಇದು ಮಾನಸಿಕ ಮತ್ತು ದೈಹಿಕ ನೋವನ್ನುಂಟು ಮಾಡುತ್ತದೆ ಎಂದು ಪೀಠವು ತಿಳಿಸಿತು.
2024,ಡಿ.9ರ ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಮರಣ ದಂಡನೆ ಪ್ರಕರಣಗಳು ಮತ್ತು ಕ್ಷಮಾದಾನ ಅರ್ಜಿಗಳು ತ್ವರಿತವಾಗಿ ಇತ್ಯರ್ಥಗೊಳ್ಳುವಂತಾಗಲು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕ್ಷಮಾದಾನ ಅರ್ಜಿಗಳು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಬಳಿ ದೀರ್ಘಾವಧಿಗೆ ಬಾಕಿಯಿರುವಾಗ ಕೈದಿಯು ಅನಿಶ್ಚಿತತೆಯನ್ನು ಅನುಭವಿಸುತ್ತಿರುತ್ತಾನೆ ಮತ್ತು ಇದು ಖಂಡಿತವಾಗಿಯೂ ಆತನ/ಆಕೆಯ ಸಂಕಷ್ಟಕ್ಕೆ ಕಾರಣವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಇಬ್ಬರು ಅಪರಾಧಿಗಳಾದ ಪುರುಷೋತ್ತಮ ದಶರಥ ಬೊರಾಟೆ ಮತ್ತು ಪ್ರದೀಪ ಯಶವಂತ ಕೊಕಾಡೆ ಅವರ ಮರಣ ದಂಡನೆಯನ್ನು ಒಟ್ಟು 35 ವರ್ಷಗಳ ಜೀವಾವಧಿ ಶಿಕ್ಷೆಗೆ ತಗ್ಗಿಸಿದ್ದ ಮುಂಬೈ ನ್ಯಾಯಾಲಯದ 2019,ಜು.29ರ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತು.
ಪ್ರಕರಣವು 2007,ನ.1ರಂದು ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನಿಂದ ಬಿಪಿಒ ಉದ್ಯೋಗಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದೆ.
ಕ್ಷಮಾದಾನ ಅರ್ಜಿಗಳ ಪರಿಶೀಲನೆ ಮತ್ತು ಮರಣ ದಂಡನೆ ಜಾರಿಗೆ ವಾರಂಟ್ಗಳನ್ನು ಹೊರಡಿಸುವುದು ಸೇರಿದಂತೆ ಶಿಕ್ಷೆಯ ಜಾರಿ ಪ್ರಕ್ರಿಯೆಯ ಪ್ರತಿ ಹಂತದಲ್ಲಿಯೂ ನಿವಾರಿಸಬಹುದಾದ ವಿಳಂಬವುಂಟಾಗುತ್ತಿದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿದೆ.
ಶಿಕ್ಷೆಯನ್ನು ಪ್ರಕಟಿಸುವುದರೊಂದಿಗೆ ಸಂವಿಧಾನದ ವಿಧಿ 21 ಅಂತ್ಯಗೊಳ್ಳುವುದಿಲ್ಲ. ಅದು ಶಿಕ್ಷೆ ಜಾರಿಯ ಹಂತಕ್ಕೂ ವಿಸ್ತರಿಸುತ್ತದೆ ಎಂದು ಬೆಟ್ಟು ಮಾಡಿದ ಪೀಠವು,ಶಿಕ್ಷೆಯ ದೃಢೀಕರಣದ ಬಳಿಕ ಮರಣ ದಂಡನೆಯನ್ನು ಜಾರಿಗೊಳಿಸುವಲ್ಲಿ ಅತಿಯಾದ ಮತ್ತು ಯಾವುದೇ ವಿವರಣೆಯಿರದ ವಿಳಂಬವುಂಟಾದರೆ ಕೈದಿಯು ಸಂವಿಧಾನದ ವಿಧಿ 32ರಡಿ ಸರ್ವೋಚ್ಚ ನ್ಯಾಯಾಲಯವನ್ನು ಅಥವಾ ಸಂವಿಧಾನದ ವಿಧಿ 226ರಡಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಎತ್ತಿ ಹಿಡಿಯಿತು.