ಮಿತಿಮೀರಿದ ಮಾಲಿನ್ಯ; ದೆಹಲಿ ಶಾಲೆಗಳಿಗೆ ರಜೆ
Photo: PTI
ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಪ್ರಮಾಣದ ಮಾಲಿನ್ಯವನ್ನು ದಾಖಲಿಸಿದ ಬೆನ್ನಲ್ಲೇ ಗುರುವಾರ ವಾಯು ತುರ್ತು ಸ್ಥಿತಿಯನ್ನು ಘೋಷಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಎಲ್ಲ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಎಲ್ಲ ಅನಗತ್ಯ ನಿರ್ಮಾಣ ಚಟುವಟಿಕೆಗಳನ್ನು ತಕ್ಷಣದಿಂದ ರದ್ದುಪಡಿಸಲಾಗಿದ್ದು, ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಕಾರುಗಳನ್ನು ದೆಹಲಿಯ ಗುರುಗ್ರಾಮ, ಫರೀದಾಬಾಧ್, ಗಾಜಿಯಾಬಾಧ್ ಮತ್ತು ಗೌತಮಬುದ್ಧ ನಗರಗಳಲ್ಲಿ ನಿಷೇಧಿಸಲಾಗಿದೆ.
ವಾಯುಗುಣಮಟ್ಟ ಸೂಚ್ಯಂಕ ಸೊನ್ನೆಯಿಂದ 50 ಇದ್ದರೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. 51-100 ಇದ್ದಲ್ಲಿ ಸಮಾಧಾನಕರ, 101-200ನ್ನು ಮಂದ ಮಾಳಿನ್ಯ, 201-300ನ್ನು ಕಳಪೆ, 301-400ನ್ನು ತೀರಾ ಕಳಪೆ, 401-500ನ್ನು ತೀವ್ರ ಸ್ವರೂಪದ ಮಾಲಿನ್ಯ ಹಾಗೂ 500ಕ್ಕಿಂತ ಅಧಿಕ ಇರುವುದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿ ಗುರುವಾರ ರಾತ್ರಿ ಎಕ್ಯೂಐ 422 ಆಗಿದೆ. ಇದು ಈ ಋತುವಿನಲ್ಲಿ ದಾಖಲಾದ ಅತ್ಯಧಿಕ ಮಾಲಿನ್ಯ ಪ್ರಮಾಣವಾಗಿದೆ.