ಮಹಿಳೆಯರ ಮೇಲಿನ ಹಿಂಸೆ ತಡೆಯಲು ಹಾಲಿ ಇರುವ ಕಾನೂನು ಕಠಿಣವಾಗಿವೆ, ಅನುಷ್ಠಾನಗೊಳಿಸಿ: ಮಮತಾಗೆ ಕೇಂದ್ರ ತಿರುಗೇಟು
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (PTI)
ಹೊಸದಿಲ್ಲಿ: ಮಹಿಳೆಯರ ಮೇಲಿನ ಹಿಂಸೆ ಮತ್ತು ಅಪರಾಧಗಳನ್ನು ತಡೆಯಲು ಹಾಲಿ ಇರುವ ಕಾನೂನುಗಳು ಸಾಕಷ್ಟು ಕಠಿಣವಾಗಿವೆ; ಪಶ್ಚಿಮ ಬಂಗಾಳ ಸರ್ಕಾರ ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಈ ಸಂಬಂಧ ಪತ್ರ ಬರೆದಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ, ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳ ವಿಚಾರಣೆಗಾಗಿ ಹೆಚ್ಚುವರಿಯಾಗಿ ಇರುವ 11 ತ್ವರಿತಗತಿ ವಿಶೇಷ ನ್ಯಾಯಾಲಯಗಳನ್ನು ರಾಜ್ಯ ಸರ್ಕಾರ ಆರಂಭಿಸಿಲ್ಲ ಎಂದು ಆಪಾದಿಸಿದ್ದಾರೆ.
ಪಶ್ಚಿಮ ಬಂಗಾಳ 88 ತ್ವರಿತಗತಿ ನ್ಯಾಯಾಲಯಗಳನ್ನು ಆರಂಭಿಸಿದೆ. ಆದರೆ ಇವು ಕೇಂದ್ರ ಸರ್ಕಾರಿ ಯೋಜನೆಯಡಿ ಬರುವ ತ್ವರಿತಗತಿ ವಿಶೇಷ ನ್ಯಾಯಾಲಯಗಳಲ್ಲ ಎಂದು ವಿವರಿಸಿದ್ದಾರೆ. ಅತ್ಯಾಚಾರ ಹಾಗೂ ಹತ್ಯೆಯಂಥ ಘೋರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಶಿಕ್ಷೆ ವಿಧಿಸುವ ಸಲುವಾಗಿ ಕಠಿಣ ಕೇಂದ್ರೀಯ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಕಾಲಮಿತಿಯಲ್ಲಿ ಮಾಡುವಂತೆ ಆಗ್ರಹಿಸಿ ಮಮತಾ ಇತ್ತೀಚೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದರು.