ಕಳೆದೆರಡು ದಿನಗಳಲ್ಲಿ ಅಟ್ಟಾರಿ ಮೂಲಕ ಭಾರತವನ್ನು ತೊರೆದ 272 ಪಾಕ್ ಪ್ರಜೆಗಳು; ಕೊನೆಯ ದಿನವಾದ ರವಿವಾರವೂ ಸರತಿ ಸಾಲು
Photo: PTI
ಹೊಸದಿಲ್ಲಿ: ಕಳೆದ ಎರಡು ದಿನಗಳಲ್ಲಿ ಪಂಜಾಬಿನ ಅಟ್ಟಾರಿ-ವಾಘಾ ಗಡಿಕೇಂದ್ರದ ಮೂಲಕ ಸುಮಾರು 272 ಪಾಕಿಸ್ತಾನಿ ಪ್ರಜೆಗಳು ಭಾರತದಿಂದ ನಿರ್ಗಮಿಸಿದ್ದಾರೆ.
12 ವಿಭಾಗಗಳಲ್ಲಿ ಅಲ್ಪಾವಧಿ ವೀಸಾಗಳನ್ನು ನೀಡಲಾಗಿರುವ ಪಾಕಿಸ್ತಾನಿಗಳಿಗೆ ಭಾರತವನ್ನು ತೊರೆಯಲು ರವಿವಾರ ಅಂತಿಮ ದಿನವಾಗಿದ್ದು,ಗಡಿ ಕೇಂದ್ರದಲ್ಲಿ ನೂರಾರು ಪಾಕಿಗಳು ಸರತಿ ಸಾಲುಗಳಲ್ಲಿ ಕಾಯುತ್ತಿದ್ದಾರೆ. ಗಡುವು ಅಂತ್ಯಗೊಳ್ಳುವ ಮುನ್ನ ಭಾರತವನ್ನು ತೊರೆದವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.
13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 629 ಭಾರತೀಯರು ಅಟ್ಟಾರಿ-ವಾಘಾ ಗಡಿಕೇಂದ್ರದ ಮೂಲಕ ಪಾಕಿಸ್ತಾನದಿಂದ ಸ್ವದೇಶಕ್ಕೆ ಮರಳಿದ್ದಾರೆ.
ಎ.22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಹೆಚ್ಚಿನವರು ಪ್ರವಾಸಿಗಳು ಸೇರಿದಂತೆ 26 ಜನರು ಕೊಲ್ಲಲ್ಪಟ್ಟ ಬೆನ್ನಿಗೇ ಸರಕಾರವು ಪಾಕ್ ಪ್ರಜೆಗಳಿಗೆ ‘ದೇಶ ಬಿಟ್ಟು ತೊಲಗಿ’ ನೋಟಿಸನ್ನು ಹೊರಡಿಸಿತ್ತು.
ಸಾರ್ಕ್ ವೀಸಾಗಳನ್ನು ಹೊಂದಿದ್ದವರಿಗೆ ಭಾರತದಿಂದ ನಿರ್ಗಮಿಸಲು ಎ.26 ಕೊನೆಯ ದಿನಾಂಕವಾಗಿದ್ದರೆ, ವೈದ್ಯಕೀಯ ವೀಸಾಗಳನ್ನು ಹೊಂದಿರುವವರಿಗೆ ಎ.29ರ ಗಡುವನ್ನು ನೀಡಲಾಗಿದೆ.
ಆಗಮನದ ಬಳಿಕ ವೀಸಾ, ಉದ್ಯಮ, ಚಲನಚಿತ್ರ, ಪರ್ತಕರ್ತ, ಭಾರತದ ಮೂಲಕ ಬೇರೆ ದೇಶಕ್ಕೆ ತೆರಳಲು ಟ್ರಾನ್ಸಿಟ್ ವೀಸಾ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ, ಪ್ರವಾಸಿ ಗುಂಪು, ಯಾತ್ರಿ ಮತ್ತು ಯಾತ್ರಿಗಳ ಗುಂಪು; ಈ 12 ವರ್ಗಗಳಿಗೆ ಸೇರಿದ ವೀಸಾಗಳನ್ನು ಹೊಂದಿರುವವರಿಗೆ ಭಾರತದಿಂದ ನಿರ್ಗಮಿಸಲು ರವಿವಾರದ ಗಡುವು ವಿಧಿಸಲಾಗಿತ್ತು.
ಆದರೆ ದೀರ್ಘಾವಧಿಯ ಹಾಗೂ ರಾಜತಾಂತ್ರಿಕ ಅಥವಾ ಅಧಿಕಾರಿ ವೀಸಾಗಳನ್ನು ಹೊಂದಿರುವವರಿಗೆ ‘ಭಾರತ ಬಿಟ್ಟು ತೊಲಗಿ’ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಅಧಿಕಾರಿಗಳ ಪ್ರಕಾರ ಎ.25ರಂದು 191 ಮತ್ತು ಎ.26ರಂದು 81 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತದಿಂದ ನಿರ್ಗಮಿಸಿದ್ದಾರೆ.
ಎ.25ರಂದು 287 ಮತ್ತು ಎ.26ರಂದು 13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 342 ಭಾರತೀಯರು ಪಾಕಿಸ್ತಾನದಿಂದ ಅಟ್ಟಾರಿ-ವಾಘಾ ಮೂಲಕ ಸ್ವದೇಶಕ್ಕೆ ಮರಳಿದ್ದರು.
ಕೆಲವು ಪಾಕಿಸ್ತಾನಿಗಳು ವಿಮಾನ ನಿಲ್ದಾಣಗಳ ಮೂಲಕವೂ ಭಾರತವನ್ನು ತೊರೆದಿರಬಹುದು. ಭಾರತವು ಪಾಕಿಸ್ತಾನದಿಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿಲ್ಲ. ಹೀಗಾಗಿ ಅವರು ಇತರ ದೇಶಗಳಿಗೆ ತೆರಳಿರಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಅಲ್ಪಾವಧಿ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿಗಳ ಪೈಕಿ ಅತ್ಯಂತ ಹೆಚ್ಚು, ಅಂದರೆ ಸುಮಾರು 1,000 ಜನರು ಮಹಾರಾಷ್ಟ್ರದಲ್ಲಿ ಉಳಿದುಕೊಂಡಿದ್ದರು. ಸುಮಾರು 5,050 ಪಾಕ್ ಪ್ರಜೆಗಳು ಮಹಾರಾಷ್ಟ್ರದಲ್ಲಿದ್ದು, ಹೆಚ್ಚಿನವರು ದೀರ್ಘಾವಧಿಯ ವೀಸಾಗಳನ್ನು ಹೊಂದಿದ್ದಾರೆ. ಕುತೂಹಲಕಾರಿಯಾಗಿ,ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರದಲ್ಲಿ ತಂಗಿದ್ದ 107 ಪಾಕ್ ಪ್ರಜೆಗಳು ಪತ್ತೆಯಾಗಿಲ್ಲ. ಅಧಿಕೃತ ಅಂಕಿ ಅಂಶಗಳ ಪ್ರಕಾರ ತೆಲಂಗಾಣದಲ್ಲಿ 208, ಕೇರಳದಲ್ಲಿ 104, ಮಧ್ಯಪ್ರದೇಶದಲ್ಲಿ 228, ಒಡಿಶಾದಲ್ಲಿ 12, ಗೋವಾದಲ್ಲಿ ಮೂವರು ಪಾಕ್ ಪ್ರಜೆಗಳಿದ್ದು, ಈ ಪೈಕಿ ಅಲ್ಪಾವಧಿ ವೀಸಾಗಳನ್ನು ಹೊಂದಿದ್ದ ಹೆಚ್ಚಿನವರು ಈಗಾಗಲೇ ಭಾರತದಿಂದ ನಿರ್ಗಮಿಸಿದ್ದಾರೆ.
ಗುಜರಾತಿನಲ್ಲಿ ಅಲ್ಪಾವಧಿ ವೀಸಾಗಳನ್ನು ಹೊಂದಿದ್ದ ಏಳು ಪಾಕಿಸ್ತಾನಿಗಳಿದ್ದು, ಅವರು ಈಗಾಗಲೇ ಭಾರತವನ್ನು ತೊರೆದಿದ್ದಾರೆ. ಅಲ್ಲದೆ ದೀರ್ಘಾವಧಿ ವೀಸಾಗಳನ್ನು ಹೊಂದಿರುವ 438 ಪಾಕ್ ಪ್ರಜೆಗಳಿದ್ದು, ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಹಿಂದುಗಳು ಅವರಲ್ಲಿ ಸೇರಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಲ್ಲ ವಿಭಾಗಗಳ ಪಾಕ್ ಪ್ರಜೆಗಳನ್ನು ಮರಳಿ ಕಳುಹಿಸಲಾಗಿದೆ. ರಾಜ್ಯದಲ್ಲಿ ಈಗಲೂ ಓರ್ವ ಪಾಕಿಸ್ತಾನಿ ಪ್ರಜೆಯಿದ್ದು, ಆತನನ್ನು ಎ.30ರಂದು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗುವುದು ಎಂದು ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಗಡುವಿನ ನಂತರ ಯಾವುದೇ ಪಾಕ್ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದರು.