ಹೈದರಾಬಾದ್ನ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಬೇಳೆಕಾಳುಗಳು, ಹಾಲಿನ ಉತ್ಪನ್ನಗಳ ಪತ್ತೆ!
ಸೇವನೆಗಾಗಿಯಲ್ಲ, ವಿಲೇವಾರಿಗೆ ಇಟ್ಟಿದ್ದು ಎಂದು ಸ್ಪಷ್ಟೀಕರಣ ನೀಡಿದ ಆಡಳಿತ ಮಂಡಳಿ
Credit: X/@RameshwaramCafe
ಹೈದರಾಬಾದ್ : ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಉದ್ದಿನ ಬೇಳೆ ಹಾಗೂ ಕೆಲವು ಹಾಲಿನ ಉತ್ಪನ್ನಗಳ ದಾಸ್ತಾನನ್ನು ತೆಲಂಗಾಣದ ಆಹಾರ ಸುರಕ್ಷತಾ ಪ್ರಾಧಿಕಾರಗಳು ಪತ್ತೆ ಹಚ್ಚಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ರೆಸ್ಟೋರೆಂಟ್ ನ ಆಡಳಿತ ಮಂಡಳಿಯು, ಆ ದಾಸ್ತಾನನ್ನು ವಿಲೇವಾರಿಗಾಗಿ ಇಡಲಾಗಿತ್ತೇ ಹೊರತು ಸೇವನೆಗಾಗಿಯಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಗುರುವಾರ ರಾತ್ರಿ ಪೋಸ್ಟ್ ಮಾಡಿರುವ ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರು, “ಮೇ 23, 2024ರಂದು ಕಾರ್ಯಪಡೆಯು ಮಾಧಾಪುರ್ ಪ್ರದೇಶದಲ್ಲಿ ತಪಾಸಣೆ ಕೈಗೊಂಡಿತು. ರಾಮೇಶ್ವರಂ ಕೆಫೆಯಲ್ಲಿ 16,000 ರೂ. ಮೌಲ್ಯದ, 100 ಕೆಜಿ ಉದ್ದಿನ ಬೇಳೆಯು ಮಾರ್ಚ್, 2024ಕ್ಕೆ ಅವಧಿ ಮೀರಿರುವುದು ಕಂಡು ಬಂದಿತು. ಇದರೊಂದಿಗೆ 700 ರೂ. ಮೊತ್ತದ ನಂದಿನ ಮೊಸರು (10 ಕೆಜಿ), ಹಾಲು (8 ಲೀಟರ್) ಅವಧಿ ಮೀರಿರುವುದೂ ಪತ್ತೆಯಾಯಿತು. ಆ ಎಲ್ಲ ದಾಸ್ತಾನುಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು” ಎಂದು ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿರುವ ರಾಮೇಶ್ವರಂ ಕೆಫೆ, ತನ್ನ ಹೈದರಾಬಾದ್ ಮಳಿಗೆಯ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರಗಳು ಪರಿಗಣಿಸಿರುವ ಸಂಗತಿಗಳನ್ನು ಆಡಳಿತ ಮಂಡಳಿಯು ಗಮನಕ್ಕೆ ತೆಗೆದುಕೊಂಡಿದೆ. ವಾಸ್ತವಗಳನ್ನು ಪರಿಶೀಲಿಸಲು ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಹಾಗೂ ಎಲ್ಲ ಮಳಿಗೆಗಳ ದಾಸ್ತಾನು ವಿವರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಂಡಿದೆ ಎಂದು ಹೇಳಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಮೇಶ್ವರಂ ಕೆಫೆಯ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ರಾವ್ ಹಾಗೂ ರಾಘವೇಂದ್ರ ರಾವ್, “ದಾಸ್ತಾನಗಳಿಗೆ ಮೊಹರು ಹಾಕಿರುವುದು ಹಾಗೂ ಅವುಗಳನ್ನು ಬಳಸದಿರುವುದು ಕಂಡು ಬಂದಿದ್ದು, ಅವು ವಿಲೇವಾರಿಗಾಗಿ ಇದ್ದ ಪದಾರ್ಥಗಳೇ ಹೊರತು ಸೇವನೆಗಾಗಿಯಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ಉದ್ಯಮಿಗಳ ಒಡೆತನದ ಬೆಂಗಳೂರು ಮಳಿಗೆಯಲ್ಲಿ ಮಾರ್ಚ್ ತಿಂಗಳಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು.
ಎಲ್ಲ ರಾಜ್ಯಗಳಲ್ಲಿನ ತನ್ನ ಮಳಿಗೆಗಳಲ್ಲಿ ಶುದ್ಧತೆ ಹಾಗೂ ಪ್ರಮಾಣೀಕೃತ ಪರಿಶೀಲನೆಗಾಗಿ ಆದೇಶಿಸಲಾಗಿದ್ದು, ಈ ವರ್ಗದಲ್ಲಿ ತನ್ನ ಗ್ರಾಹಕರಿಗೆ ಅತ್ಯುತ್ಕೃಷ್ಟ ಸೇವೆ ಒದಗಿಸುವ ತನ್ನ ಬಲವಾದ ಬದ್ಧತೆಯ ಸಂದೇಶವನ್ನು ರವಾನಿಸಲು ಬಯಸಿದ್ದೇವೆ ಎಂದೂ ತ್ವರಿತ ಸೇವೆ ರೆಸ್ಟೋರೆಂಟ್ (QSR) ಉದ್ಯಮವಾದ ರಾಮೇಶ್ವರಂ ಕೆಫೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಪ್ರಾಧಿಕಾರಗಳಿಗೆ ಸಹಕಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಸಂಬಂಧಿತ ಅಧಿಕಾರಿಗಳಿಂದ ಇದುವರೆಗೆ ಯಾವುದೇ ಶೋಕಾಸ್ ನೋಟಿಸ್ ಅನ್ನು ಸ್ವೀಕರಿಸಿಲ್ಲ ಎಂದೂ ಹೇಳಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.