ಕುಕಿ-ರೆ ಸಮುದಾಯಗಳನ್ನು ಎಸ್ಟಿ ಪಟ್ಟಿಯಿಂದ ಕೈಬಿಡುವಂತೆ ಬೇಡಿಕೆಯಿಂದ ಮಣಿಪುರ ಇನ್ನಷ್ಟು ಪ್ರಕ್ಷುಬ್ಧ
Photo: scoll.in
ಹೊಸದಿಲ್ಲಿ: ಮಣಿಪುರದಲ್ಲಿ ಕುಕಿ-ರೆ ಸಮುದಾಯಗಳ ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯು ಜನಾಂಗೀಯ ಸಂಘರ್ಷಗಳಿಂದ ತತ್ತರಿಸಿರುವ ರಾಜ್ಯವನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸಿದೆ.
ಕುಕಿ-ರೆಗಳು ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ಎಲ್ಲ ಈಶಾನ್ಯ ರಾಜ್ಯಗಳಲ್ಲಿ ಹರಡಿಕೊಂಡಿದ್ದಾರೆ ಮತ್ತು ಈ ಪ್ರತಿ ರಾಜ್ಯದಲ್ಲಿಯೂ ಅವರು ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ಹೊಂದಿದ್ದಾರೆ.
ಮೈತೈ ರಾಜಕಾರಣಿ ಮಹೇಶ್ವರ ತೌನೋಜಮ್ ಅವರು ಕುಕಿ-ರೆಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಕೈಬಿಡುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಕುಕಿ-ರೆಗಳು ಮಣಿಪುರದ ಮೂಲನಿವಾಸಿಗಳಲ್ಲ ಎನ್ನುವುದು ಅವರ ವಾದವಾಗಿದೆ. ಮೈತೈಯಿಗಳು ಮತ್ತು ಕುಕಿ-ರೆಗಳು ಕಳೆದ ವರ್ಷದ ಮೇ 3 ರಿಂದ ಭೀಕರ ಜನಾಂಗೀಯ ಹಿಂಸಾಚಾರದಲ್ಲಿ ತೊಡಗಿಕೊಂಡಿದ್ದು, 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಸ್ವತಃ ಮೈತೈ ಆಗಿದ್ದು ತನ್ನ ಸಮುದಾಯದ ಪರ ಒಲವು ಹೊಂದಿದ್ದಾರೆ ಎಂಬ ಆರೋಪವನ್ನು ಹೊತ್ತಿರುವ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು,ವಿಷಯವನ್ನು ಪರಿಶೀಲಿಸಲು ಸರ್ವ ಬುಡಕಟ್ಟು ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಏಕೈಕ ದೊಡ್ಡ ಜನಾಂಗೀಯ ಸಮುದಾಯವಾಗಿರುವ ಮೈತೈಗಳು ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ಹೊಂದಿಲ್ಲ. ಇದು ಅನ್ಯಾಯ ಎಂದು ಭಾವಿಸಿರುವ ಸಮುದಾಯದ ಒಂದು ವರ್ಗವು ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಸುದೀರ್ಘ ಆಂದೋಲನದಲ್ಲಿ ತೊಡಗಿಕೊಂಡಿದೆ. ವಾಸ್ತವದಲ್ಲಿ ಇದು,ಉಭಯ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚು ಆಳವಾಗಿ ಬೇರೂರಿದ್ದರೂ ಮೇ ತಿಂಗಳಿನಲ್ಲಿ ಹಿಂಸಾಚಾರ ಭುಗಿಲೇಳಲು ಕಾರಣಗಳಲ್ಲಿ ಒಂದಾಗಿತ್ತು.
ತಮ್ಮನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ಕೈಬಿಡುವಂತೆ ಬೇಡಿಕೆಯು ಪ್ರತೀಕಾರದ ಕ್ರಮ ಎಂದು ಹೆಚ್ಚಿನ ಕುಕಿ-ರೆಗಳು ಭಾವಿಸಿದ್ದಾರೆ. ಮೈತೈಗಳಿಗೆ ಎಸ್ಟಿ ಸ್ಥಾನಮಾನದ ಬೇಡಿಕೆಯನ್ನು ವಿರೋಧಿಸುವಲ್ಲಿ ಕುಕಿಗಳು ಮುಂಚೂಣಿಯಲ್ಲಿದ್ದರು,ಹೀಗಾಗಿ ಸೇಡು ತೀರಿಸಿಕೊಳ್ಳಲು ಅವರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಸಮುದಾಯಕ್ಕೆ ಸೇರಿದ ಇತಿಹಾಸ ತಜ್ಞರೋರ್ವರು ಹೇಳಿದರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ)ದ ನಾಯಕರಾಗಿರುವ ತೌನೋಜಮ್ ಕಳೆದ ಡಿಸೆಂಬರ್ನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಅಹವಾಲೊಂದನ್ನು ಸಲ್ಲಿಸಿದ್ದರು. ಮಣಿಪುರದ ರೆಮಿಗಳು ಸೇರಿದಂತೆ ಕುಕಿಗಳು ರಾಜ್ಯದ ಮೂಲನಿವಾಸಿಗಳಲ್ಲ, ಹೀಗಾಗಿ ಅವರು ಪರಿಶಿಷ್ಟ ಪಂಗಡಗಳ ಸ್ಥಾನಮಾನವನ್ನು ಪಡೆಯಲು ಅರ್ಹರಲ್ಲ ಎಂದು ಅವರು ಅಹವಾಲಿನಲ್ಲಿ ವಾದಿಸಿದ್ದರು.
ಡಿ.16ರಂದು ಸಚಿವಾಲಯವು ತೌನೋಜಮ್ ಅರ್ಜಿಯನ್ನು ರಾಜ್ಯ ಸರಕಾರಕ್ಕೆ ರವಾನಿಸಿತ್ತು. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಯಾವುದೇ ತಿದ್ದುಪಡಿಗೆ ರಾಜ್ಯ ಸರಕಾರದ ಶಿಫಾರಸು ಮತ್ತು ಸಮರ್ಥನೆ ಪೂರ್ವಾಗತ್ಯವಾಗಿದೆ ಎಂದು ಸಚಿವಾಲಯವು ಹೇಳಿದೆ.
ಆದಾಗೂ ಸಚಿವಾಲಯದ ಪತ್ರ ಮತ್ತು ತೌನೋಜಮ್ ಅವರ ಅರ್ಜಿ ಇವೆರಡೂ ಜನವರಿಯಲ್ಲಷ್ಟೇ ಬಹಿರಂಗಗೊಂಡಿವೆ.
ಮೈತೈಗಳು ಆಗಾಗ್ಗೆ ಪುನರುಚ್ಚರಿಸುವ, ಕುಕಿ-ರೆಗಳು ಮಣಿಪುರದ ಮೂಲನಿವಾಸಿಗಳಲ್ಲ ಎಂಬ ವಾದವನ್ನು ತೌನೋಜಮ್ ಅವರ ಬೇಡಿಕೆಯು ಪ್ರಮುಖವಾಗಿ ಆಧರಿಸಿದೆ. ತನ್ನ ವಾದವನ್ನು ಬೆಂಬಲಿಸಲು ಅವರು ಹಲವಾರು ವಸಾಹತುಶಾಹಿ ಪಠ್ಯಗಳನ್ನು ನೆಚ್ಚಿಕೊಂಡಿದ್ದು, ಬಳಿಕ ಹೆಚ್ಚು ಸಮಕಾಲೀನ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಸಂವಿಧಾನದಡಿ ಬುಡಕಟ್ಟು ಎಂದು ಸ್ವತಂತ್ರವಾಗಿ ಪಟ್ಟಿ ಮಾಡಿರದ 32 ಕುಕಿ-ರೆ ಸಮುದಾಯಗಳನ್ನು ಒಳಗೊಂಡಿರುವ ‘ಯಾವುದೇ ಕುಕಿ ಬುಡಕಟ್ಟು ’ ವರ್ಗವನ್ನು ಅವರು ಬೆಟ್ಟುಮಾಡಿದ್ದಾರೆ .2001 ರ ಜನಗಣತಿಯಂತೆ ಕುಕಿ-ರೆಗಳ ಜನಸಂಖ್ಯೆ 28,342 ಆಗಿತ್ತು.
‘ಯಾವುದೇ ಕುಕಿ ಬುಡಕಟ್ಟು ’ವರ್ಗದಲ್ಲಿ ಸೇರಿಸಲಾಗುವ ಬುಡಕಟ್ಟುಗಳ ಹೆಸರುಗಳನ್ನು ನಿರ್ದಿಷ್ಟ ಪಡಿಸದಿರುವುದರಿಂದ ನಿರಾಶ್ರಿತರಾಗಿರಲಿ ಅಥವಾ ಅಕ್ರಮ ವಲಸಿಗರಾಗಿರಲಿ, ಕುಕಿಗಳ ಸೋಗಿನಲ್ಲಿ ಎಸ್ಟಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಪರೋಕ್ಷ ಅವಕಾಶಗಳಿವೆ ಎಂದು ತೌನೋಜಮ್ ಅರ್ಜಿಯಲ್ಲಿ ವಾದಿಸಿದ್ದಾರೆ.
ಪ್ರಾಸಂಗಿಕವಾಗಿ ಬೀರೇನ್ ಸಿಂಗ್ ಸರಕಾರವು ಫೆಬ್ರವರಿ 2023ರಲ್ಲಿ ಮಣಿಪುರದಲ್ಲಿ ಎಸ್ಟಿ ಪಟ್ಟಿಯಿಂದ ‘ಯಾವುದೇ ಕುಕಿ ಬುಡಕಟ್ಟು ’ವರ್ಗವನ್ನು ಕೈಬಿಡುವಂತೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಕೋರಿತ್ತು.
ಕುಕಿ-ರೆ ಸಮುದಾಯವು ತೌನೋಜಮ್ ಅರ್ಜಿಯಲ್ಲಿನ ಅಂಶಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ.