ಭಯೋತ್ಪಾದನೆ ನಿಂತರೆ ಪಾಕ್ ಜೊತೆಗಿನ ಬಾಂಧವ್ಯ ವೃದ್ಧಿಗೆ ಸಿದ್ಧ : ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್
ಎಸ್. ಜೈಶಂಕರ್ | PC : PTI
ಹೊಸದಿಲ್ಲಿ : ಭಾರತವು ಇತರ ಯಾವುದೇ ನೆರೆಯ ದೇಶದ ಜೊತೆಗೆ ಹೊಂದಿರುವಂತೆ ಪಾಕಿಸ್ತಾನದೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಲು ಇಷ್ಟಪಡುತ್ತದೆ. ಆದರೆ ಇಂಥ ಬಾಂಧವ್ಯವು ಭಯೋತ್ಪಾದನೆಯಿಂದ ಮುಕ್ತವಾಗಿರಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗುರುವಾರ ಲೋಕಸಭೆಯಲ್ಲಿ ಹೇಳಿದರು.
‘‘ತಮ್ಮ ಹಿಂದಿನ ವರ್ತನೆಯನ್ನು ಬದಲಾಯಿಸಿದ್ದೇವೆ ಎನ್ನುವುದನ್ನು ಸಾಬೀತುಪಡಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ ಎನ್ನುವುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಅವರು ಬದಲಾಗದಿದ್ದರೆ, ಖಂಡಿತವಾಗಿಯೂ ಅದು ಬಾಂಧವ್ಯದ ಮೇಲೆ ಮತ್ತು ಅವರ ಮೇಲೆಯೂ ಪರಿಣಾಮ ಬೀರುತ್ತದೆ. ಚೆಂಡು ಪಾಕಿಸ್ತಾನದ ಅಂಗಣದಲ್ಲೇ ಇದೆ’’ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಸುಧಾರಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹೇಳಿದರು.
ಪಾಕಿಸ್ತಾನದ ಜೊತೆಗಿನ ವ್ಯಾಪಾರ ಮತ್ತು ವಾಣಿಜ್ಯವನ್ನು ಸುಧಾರಿಸಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಿಸಿದ ವಿದೇಶ ಸಚಿವರು, 2019ರಲ್ಲಿ ಪಾಕಿಸ್ತಾನ ಸರಕಾರ ತೆಗೆದುಕೊಂಡಿರುವ ನಿರ್ಧಾರಗಳಿಂದಾಗಿ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಕೊಂಚ ಧಕ್ಕೆಯಾಗಿತ್ತು ಎಂದು ಹೇಳಿದರು.