Fact Check| ʼಚಾಲೆಂಜ್ ವೋಟ್ʼ - ವೈರಲ್ ಸಂದೇಶದಲ್ಲಿರುವ ಮಾಹಿತಿ ಸುಳ್ಳು
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ʼಚಾಲೆಂಜ್ ವೋಟ್ʼ ಕುರಿತಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪೋಸ್ಟ್ ಪ್ರಕಾರ ಒಬ್ಬರು ಮತದಾನ ಬೂತಿಗೆ ತೆರಳಿದಾಗ ಹಾಗೂ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಾಗ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್ 49ಎ ಅಡಿಯಲ್ಲಿ ʼಚಾಲೆಂಜ್ ವೋಟ್ʼ ಮೂಲಕ ಮತದಾನಕ್ಕಾಗಿ ಕೇಳಬಹುದು.
ಅಷ್ಟೇ ಅಲ್ಲದೆ ಒಬ್ಬರ ಹೆಸರಿನಲ್ಲಿ ಮತವನ್ನು ಅದಾಗಲೇ ಬೇರೊಬ್ಬರು ಚಲಾಯಿಸಿದ್ದರೆ ಮತ ಚಲಾಯಿಸಲು “ಟೆಂಡರ್ ವೋಟ್”ಗೆ ಕೇಳಬಹುದು ಎಂದೂ ಈ ವೈರಲ್ ಸಂದೇಶದಲ್ಲಿ ಹೇಳಲಾಗಿದೆ.
ಯಾವುದೇ ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್ ಮತಗಳು ಚಲಾವಣೆಯಾಗಿದ್ದಲ್ಲಿ ಅಂತಹ ಬೂತ್ಗಳಲ್ಲಿ ಮರುಮತದಾನ ಮಾಡಬಹುದಾಗಿದೆ ಎಂದೂ ವೈರಲ್ ಸಂದೇಶ ಹೇಳಿದೆ.
ವಾಸ್ತವವೇನು?
ವೈರಲ್ ಸಂದೇಶದಲ್ಲಿ “ಚಾಲೆಂಜ್ ವೋಟ್” ಕುರಿತು ಹೇಳಲಾಗಿದೆ. ಒಬ್ಬರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದು ತಿಳಿದಾಗ ಚಾಲೆಂಜ್ ವೋಟ್ಗೆ ಕೇಳಬಹುದೆನ್ನಲಾಗಿದೆ. ಆದರೆ ಇದು ಸುಳ್ಳು. ಒಬ್ಬರಲ್ಲಿ ಮತದಾರರ ಗುರುತಿನ ಚೀಟಿ ಇದೆ ಎಂದ ಮಾತ್ರಕ್ಕೆ ಅವರಿಗೆ ಮತ ಚಲಾಯಿಸಲು ಆಗದು ಅವರ ಹೆಸರು ಮತದಾರರ ಪಟ್ಟಿಯಲ್ಲಿರಬೇಕಿದೆ.
ವೈರಲ್ ಸಂದೇಶದಲ್ಲಿ ಸೆಕ್ಷನ್ 49ಎ ಅಡಿಯಲ್ಲಿ ಚಾಲೆಂಜ್ ವೋಟ್ಗೆ ಕೇಳಬಹುದು ಎಂದು ಹೇಳಿರುವುದು ಸಂಪೂರ್ಣ ಸುಳ್ಳು. ಈ ಕುರಿತು ಎಲ್ಲಿಯೂ ಮಾಹಿತಿಯಿಲ್ಲ.
ಆದರೆ ವೈರಲ್ ಸಂದೇಶದಲ್ಲಿರುವ ಟೆಂಡರ್ ವೋಟ್ ಕುರಿತ ಮಾಹಿತಿ ನಿಜವಾಗಿದೆ. ಚುನಾವಣೆ ನಡೆಸುವ ನಿಯಮಗಳು 1961 ಇದರ ನಿಯಮ 42 ಅನ್ವಯ ಒಬ್ಬ ಮತದಾರರ ಮತವನ್ನು ಅದಾಗಲೇ ಇನ್ನೊಬ್ಬರು ಚಲಾಯಿಸಿದ್ದರೆಂದು ತಿಳಿದು ಬಂದರೆ ಪ್ರಿಸೈಡಿಂಗ್ ಅಧಿಕಾರಿಗೆ ಮಾಹಿತಿ ನೀಡಬಹುದು. ಅವರು ಮತದಾರರ ಗುರುತನ್ನು ದೃಢೀಕರಿಸಿದ ನಂತರ ಟೆಂಡರ್ಡ್ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಅನುಮತಿಸಬಹುದಾಗಿದೆ.
ಈ ಟೆಂಡರ್ಡ್ ಬ್ಯಾಲೆಟ್ ಪೇಪರ್, ಇವಿಎಂನ ಬ್ಯಾಲಟಿಂಗ್ ಯೂನಿಟ್ನಲ್ಲಿರುವ ಬ್ಯಾಲೆಟ್ ಪೇಪರ್ನಂತೆಯೇ ಇದೆ ಆದರೆ ಅದರ ಹಿಂದೆ ಸ್ಟ್ಯಾಂಪ್ ಇರುತ್ತದೆ ಅಥವಾ ಬರವಣಿಗೆ ಇರುತ್ತದೆ.
ಒಂದು ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್ ವೋಟ್ಗಳು ಚಲಾವಣೆಯಾದರೆ ಮರುಮತದಾನ ಮಾಡಬಹುದು ಎಂದು ವೈರಲ್ ಸಂದೇಶದಲ್ಲಿ ಹೇಳಿರುವುದು ಸುಳ್ಳು. ಹೈಕೋರ್ಟ್ ಸೂಚನೆಯ ಅನ್ವಯ ಮಾತ್ರ ಟೆಂಡರ್ಡ್ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂಬ ಮಾಹಿಯಿತಿದೆ.
ಒಟ್ಟಾರೆಯಾಗಿ ವೈರಲ್ ಸಂದೇಶದಲ್ಲಿದ್ದ ಚಾಲೆಂಜ್ ವೋಟ್ ಮತ್ತು ಮರುಮತದಾನ ಕುರಿತ ಮಾಹಿತಿಗಳು ತಪ್ಪು ಎಂದು ಸತ್ಯಶೋಧನೆಯಿಂದ ತಿಳಿದು ಬಂದಿದೆ.