ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು : ಏಕನಾಥ್ ಶಿಂಧೆಗೆ ಮತ್ತೆ ಕರೆ ಮಾಡಿದ ಫಡ್ನವಿಸ್, ಡಿಸಿಎಂ ವದಂತಿ ನಿರಾಕರಿಸಿದ ಶಿಂಧೆ ಪುತ್ರ
Photo | PTI
ಮುಂಬೈ : ಮುಖ್ಯಮಂತ್ರಿ ಆಯ್ಕೆ ಕುರಿತ ಸಭೆ ಮುಂದೂಡಿಕೆ ಹಿನ್ನೆಲೆ ಏಕನಾಥ್ ಶಿಂಧೆಗೆ ದೇವೇಂದ್ರ ಪಡ್ನವಿಸ್ ಮತ್ತೊಮ್ಮೆ ಕರೆ ಮಾಡಿದ್ದಾರೆ. ಇದಲ್ಲದೆ ಡಿಸಿಎಂ ಹುದ್ದೆ ನೀಡಲಾಗುತ್ತಿದೆ ಎಂಬ ವದಂತಿಗಳನ್ನು ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ನಿರಾಕರಿಸಿದ್ದಾರೆ.
ಶಿವಸೇನಾ ಸಂಸದ, ಉಸ್ತುವಾರಿ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರು ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಏಕನಾಥ್ ಶಿಂಧೆ, ಮಹಾಯುತಿ ಸರ್ಕಾರದ ಪ್ರಮಾಣ ವಚನ ಸಮಾರಂಭವು ಸ್ವಲ್ಪ ವಿಳಂಬವಾಗಿದೆ. ಇದು ಚರ್ಚೆಗಳು ಮತ್ತು ವದಂತಿಗಳಿಗೆ ಕಾರಣವಾಗಿದೆ. ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆನಾರೋಗ್ಯದ ಕಾರಣಗಳಿಂದ ತಮ್ಮ ತವರು ಮನೆಯಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಇದು ಈ ವದಂತಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಕಳೆದ ಎರಡು ದಿನಗಳಿಂದ ನಾನು ಉಪಮುಖ್ಯಮಂತ್ರಿಯಾಗುತ್ತೇನೆ ಎಂಬ ಊಹಾಪೋಹದ ವರದಿಗಳು ಹರಿದಾಡುತ್ತಿವೆ. ವಾಸ್ತವದಲ್ಲಿ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ನಾನು ಉಪಮುಖ್ಯಮಂತ್ರಿಯಾಗಲಿದ್ದೇನೆ ಎಂಬ ಎಲ್ಲಾ ಸುದ್ದಿಗಳು ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಸಂಬಂಧಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ಬಿಜೆಪಿ ನೇಮಿಸಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಡಿಸೆಂಬರ್ 4ರಂದು ಬೆಳಿಗ್ಗೆ 10 ಗಂಟೆಗೆ ಮಹಾರಾಷ್ಟ್ರ ವಿಧಾನ ಭವನದಲ್ಲಿ ನಡೆಯಲಿದೆ. ಮಂಗಳವಾರ ಸಂಜೆ ವೇಳೆಗೆ ಪಕ್ಷದ ವೀಕ್ಷಕರು ಮುಂಬೈ ತಲುಪುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ತೀವ್ರ ಜ್ವರದಿಂದ ಚೇತರಿಸಿಕೊಂಡ ನಂತರ ಸೋಮವಾರ ಬೆಳಿಗ್ಗೆ ಮುಂಬೈಗೆ ಮರಳಿದ್ದಾರೆ. ಆದರೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ ಹಿನ್ನೆಲೆ ಅವರು ಯಾರನ್ನೂ ಭೇಟಿಯಾಗಿಲ್ಲ ಎನ್ನಲಾಗಿದೆ.