ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ಸೋಲಿಗಾಗಿ ಫಡ್ನವೀಸ್, ಶಾ ಸಂಚು ಹೂಡಿದ್ದರು: ಸಂಜಯ ರಾವುತ್
ಸಂಜಯ ರಾವುತ್ | PTI
ಮುಂಬೈ: ನಾಗ್ಪುರ ಲೋಕಸಭಾ ಕ್ಷೇತ್ರದಲ್ಲಿ ನಿತಿನ ಗಡ್ಕರಿಯವರು ಸೋಲನ್ನಪ್ಪುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಸಲತ್ತು ನಡೆಸಿದ್ದರು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ ರಾವುತ್ ಅವರು ರವಿವಾರ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಗಡ್ಕರಿ ಅವರ ಸೋಲು ಸಾಧ್ಯವಿಲ್ಲ ಎನ್ನುವುದು ಗೊತ್ತಾದ ಬಳಿಕ ಫಡ್ನವೀಸ್ ಇಷ್ಟವಿಲ್ಲದೆ ಗಡ್ಕರಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಗಡ್ಕರಿ ಸೋಲುವಂತಾಗಲು ಅವರು ಪ್ರತಿಪಕ್ಷಕ್ಕೆ ನೆರವಾಗಿದ್ದರು ಎಂದು ನಾಗ್ಪುರದಲ್ಲಿಯ ಆರೆಸ್ಸೆಸ್ ಜನರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ ಎಂದು ರಾವುತ್ ಶಿವಸೇನೆ (ಯುಬಿಟಿ)ಯ ಮುಖವಾಣಿ ’ಸಾಮ್ನಾ’ದಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ ಬರೆದಿದ್ದಾರೆ.
ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಪ್ರತಿ ಕ್ಷೇತ್ರದಲ್ಲಿ ಗಣನೀಯ ಮೊತ್ತದ ಹಣವನ್ನು ಹಂಚಿದ್ದರು ಮತ್ತು ಅಜಿತ ಪವಾರ್ ನೇತೃತ್ವದ ಎನ್ಸಿಪಿ ಅಭ್ಯರ್ಥಿಗಳ ಹಿನ್ನಡೆಗಾಗಿ ಪ್ರಯತ್ನಿಸಿದ್ದರು ಎಂದೂ ರಾವುತ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ತನ್ನ ಲೇಖನದಲ್ಲಿ ಕುಟುಕಿರುವ ರಾವುತ್,ಲೋಕಸಭಾ ಚುನಾವಣೆಗಳ ಬಳಿಕ ಮೋದಿ-ಶಾ ಸರಕಾರ ಅಧಿಕಾರಕ್ಕೆ ಮರಳಿದರೆ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರದ ಎಲ್ಲ 48 ಲೋಕಸಭಾ ಸ್ಥಾನಗಳಿಗೆ ಎ.19ರಿಂದ ಮೇ 20ರವರೆಗೆ ಐದು ಹಂತಗಳಲ್ಲಿ ಮತದಾನ ನಡೆದಿದೆ.
ರಾವುತ್ ಆರೋಪಗಳನ್ನು ತಿರಸ್ಕರಿಸಿರುವ ರಾಜ್ಯ ಬಿಜೆಪಿ ವರಿಷ್ಠ ಚಂದ್ರಶೇಖರ ಬಾವಂಕುಲೆ,‘ಅವರು ಭ್ರಮೆಯಲ್ಲಿದ್ದಾರೆ. ಬಿಜೆಪಿ ಒಂದು ಪಕ್ಷವಲ್ಲ,ಕುಟುಂಬವಾಗಿದೆ. ಯಾವಾಗಲೂ ಗುಂಪುಗಾರಿಕೆಯ ರಾಜಕಾರಣವನ್ನು ಮಾಡುವ ಜನರು ಕುಟುಂಬ ಬಂಧಗಳನ್ನೂ ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಮೋದಿ,ಶಾ,ಆದಿತ್ಯನಾಥ,ಗಡ್ಕರಿ ಮತ್ತು ಫಡ್ನವೀಸ್ ಬಿಜೆಪಿ ಕುಟುಂಬದ ಭಾಗವಾಗಿದ್ದಾರೆ. ನಾವು ಯಾವಾಗಲೂ ದೇಶ ಮೊದಲು,ಪಕ್ಷ ಮತ್ತು ವ್ಯಕ್ತಿ ನಂತರ ಎಂಬ ತತ್ವದಂತೆ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.