ಕಾಡ್ಗಿಚ್ಚು ನಿಯಂತ್ರಿಸಲು ವಿಫಲ | ಕೇಂದ್ರ , ಉತ್ತರಾಖಂಡ ಸರಕಾರಕ್ಕೆ ಸುಪ್ರೀಂ ತರಾಟೆ
“ಫಾರೆಸ್ಟ್ ಗಾರ್ಡ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದೇಕೆ?”
ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ : ಕಾಡ್ಗಿಚ್ಚನ್ನು ನಿಯಂತ್ರಿಸುವಲ್ಲಿ ದೃಢನಿರ್ಧಾರವನ್ನು ಕೈಗೊಳ್ಳದೆ ಇರುವುದಕ್ಕಾಗಿ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಹಾಗೂ ಉತ್ತರಾಖಂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ವಿವರಣೆ ನೀಡುವಂತೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯವರಿಗೆ ಸುಪ್ರೀಂಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಅದು ಆದೇಶಿಸಿದೆ.
ಪರ್ವತರಾಜ್ಯವಾದ ಉತ್ತರಾಖಂಡದಲ್ಲಿ ನವೆಂಬರ್ ತಿಂಗಳಿನಿಂದೀಚೆಗೆ 1,145 ಎಕರೆಗೂ ಅಧಿಕ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ಹಾವಳಿಯುಂಟಾಗಿದ್ದು ಅಪಾರ ನಾಶ, ನಷ್ಟ ಸಂಭವಿಸಿದೆ.
ಕಾಡ್ಗಿಚ್ಚು ನಿಯಂತ್ರಿಸುವಲ್ಲಿ ಹಣಕಾಸಿನ ಕೊರತೆಯ ನೆಪಹೇಳಿರುವ ರಾಜ್ಯ ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಕಾಡ್ಗಿಚ್ಚುಗಳನ್ನು ನಿಯಂತ್ರಿಸಲು ಒಂದೆಡೆ ಉತ್ತರಾಖಂಡವು ಪ್ರಯಾಸ ಪಡುತ್ತಿದ್ದರೆ, ಇನ್ನೊಂದೆಡೆ ಫಾರೆಸ್ಟ್ ಗಾರ್ಡ್ ಗಳನ್ನು ಚುನಾವಣಾ ಕರ್ತವ್ಯಕ್ಕ ನಿಯೋಜಿಸಿರುವುದರ ಬಗ್ಗೆಯೂ ಅದು ಪ್ರಶ್ನಿಸಿದೆ.
ಕಾಡ್ಗಿಚ್ಚು ನಿಯಂತ್ರಣಕ್ಕೆ ರಾಜ್ಯ ಸರಕಾರವು 9 ಕೋಟಿ ರೂ. ಅನುದಾನ ಕೇಳಿದ್ದರೂ, ಕೇವಲ 3.15 ಕೋಟಿ ರೂ. ನೀಡಿರುವ ಕೇಂದ್ರ ಸರಕಾರದ ಧೋರಣೆಯು, ಆಡಳಿತದ ಶೋಚನೀಯ ಸ್ಥಿತಿಯನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.
ಕಾಡ್ಗಿಚ್ಚು ನಿಯಂತ್ರಿಸಲು ಯಾಕೆ ಸಮರ್ಪಕ ನಿಧಿಗಳನ್ನು ನೀಡಲಾಗಿಲ್ಲ. ಕಾಡ್ಗಿಚ್ಚಿನ ನಡುವೆಯೂ ಅರಣ್ಯ ಉದ್ಯೋಗಿಗಳನ್ನು ಯಾಕೆ ನೀವು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದೀರಿ ಎಂದು ನ್ಯಾಯಾಲಯ ಪ್ರಶ್ನಿಸಿತು.