ಪೈಲಟ್ಗಳ ನಿಯೋಜನೆಯಲ್ಲಿ ಲೋಪ: ಏರ್ ಇಂಡಿಯಾಕ್ಕೆ 99 ಲಕ್ಷ ರೂ.ದಂಡ
ಏರ್ ಇಂಡಿಯಾ | PC : X
ಹೊಸದಿಲ್ಲಿ: ಮುಂಬೈ-ರಿಯಾದ್ ನಡುವಿನ ಯಾನದಲ್ಲಿ ಪೈಲಟ್ಗಳ ನಿಯೋಜನೆಯಲ್ಲಿ ಲೋಪವೆಸಗಿದ್ದು ಏರ್ ಇಂಡಿಯಾಕ್ಕೆ ದುಬಾರಿಯಾಗಿ ಪರಿಣಮಿಸಿದೆ. ವಾಯುಯಾನ ಸುರಕ್ಷತಾ ನಿಯಂತ್ರಕ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಅರ್ಹರಲ್ಲದ ಪೈಲಟ್ಗಳನ್ನು ನಿಯೋಜಿಸಿದ್ದಕ್ಕಾಗಿ ಏರ್ ಇಂಡಿಯಾ ಮತ್ತು ಅದರ ಇಬ್ಬರು ನಿರ್ದೇಶಕರಿಗೆ ಒಟ್ಟು 99 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ.
ಏರ್ ಇಂಡಿಯಾ ಜುಲೈನಲ್ಲಿ ಡಿಜಿಸಿಎಗೆ ಸಲ್ಲಿಸಿದ್ದ ಸ್ವಯಂಪ್ರೇರಿತ ವರದಿಯ ಮೂಲಕ ಈ ಘಟನೆ ಗಮನಕ್ಕೆ ಬಂದಿದ್ದು,ಮುಂಬೈ-ರಿಯಾದ್ ನಡುವಿನ ಯಾನಕ್ಕೆ ಸಂಬಂಧಿಸಿತ್ತು. ಯಾನವನ್ನು ಟ್ರೇನಿಂಗ್ ಕ್ಯಾಪ್ಟನ್ (ತರಬೇತಿ ನೀಡಲು ಅರ್ಹ ಪೈಲಟ್) ಟ್ರೇನಿ ಪೈಲಟ್ (ತರಬೇತಿ ಪಡೆಯುವ ಪೈಲಟ್) ಜೊತೆ ನಿರ್ವಹಿಸಬೇಕಿತ್ತು. ಆದರೆ ನಿಗದಿತ ಟ್ರೇನಿಂಗ್ ಕ್ಯಾಪ್ಟನ್ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಪೈಲಟ್ ರೋಸ್ಟರಿಂಗ್ನಲ್ಲಿ ಬದಲಾವಣೆ ಮಾಡಬೇಕಾಗಿ ಬಂದಿತ್ತು. ಆದರೆ ಇನ್ನೋರ್ವ ಟ್ರೇನಿಂಗ್ ಕ್ಯಾಪ್ಟನ್ ನಿಯೋಜಿಸುವ ಬದಲು ಸಾಮಾನ್ಯ ಪೈಲಟ್ನ್ನು ನಿಯೋಜಿಸಲಾಗಿತ್ತು. ನಿಯಮಗಳ ಪ್ರಕಾರ ಯಾನವನ್ನು ನಿರ್ವಹಿಸುವಾಗ ಟ್ರೇನಿ ಪೈಲಟ್ಗಳ ಜೊತೆ ಟ್ರೇನಿಂಗ್ ಪೈಲಟ್ಗಳು ಇರುವುದು ಕಡ್ಡಾಯವಾಗಿದೆ. ಟ್ರೇನಿ ಪೈಲಟ್ಗಳನ್ನು ಟ್ರೇನಿಂಗ್ ಪೈಲಟ್ ಸ್ಥಾನಮಾನವನ್ನು ಹೊಂದಿರದ ಸಾಮಾನ್ಯ ಪೈಲಟ್ಗಳೊಂದಿಗೆ ನಿಯೋಜಿಸುವಂತಿಲ್ಲ.
ಬಲ್ಲ ಮೂಲಗಳ ಪ್ರಕಾರ ಯಾನವನ್ನು ನಿರ್ವಹಿಸುತ್ತಿದ್ದ ಇಬ್ಬರೂ ಪೈಲಟ್ಗಳು ರೋಸ್ಟರಿಂಗ್ ಯಡವಟ್ಟನ್ನು ಹಾರಾಟದ ಸಮಯದಲ್ಲಿ ಅರಿತುಕೊಂಡಿದ್ದರು. ಬಳಿಕ ಅವರು ಏರ್ ಇಂಡಿಯಾಕ್ಕೆ ವರದಿಯನ್ನು ಸಲ್ಲಿಸಿದ್ದರು ಮತ್ತು ಅದು ಡಿಜಿಸಿಎಗೆ ತನ್ನ ವರದಿಯನ್ನು ಒಪ್ಪಿಸಿತ್ತು.
ತನಿಖೆಯಲ್ಲಿ ಏರ್ ಇಂಡಿಯಾದ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನ್ಯೂನತೆಗಳನ್ನು ಎಸಗಿದ್ದು ಮತ್ತು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದು ಬಹಿರಂಗಗೊಂಡಿದೆ ಮತ್ತು ಇವು ಸುರಕ್ಷತೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುವಂಥದ್ದಾಗಿದ್ದವು ಎಂದು ಡಿಜಿಸಿಎ ತನ್ನ ಆದೇಶದಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಅದು ಏರ್ ಇಂಡಿಯಾಕ್ಕೆ ಮತ್ತು ಸಂಬಂಧಿಸಿದ ಪೈಲಟ್ಗಳಿಗೆ ಸೂಚಿಸಿದೆ.