ಹೊಸ ವಲಸೆ ಮಸೂದೆ | ನಕಲಿ ಪಾಸ್ಪೋರ್ಟ್ ಬಳಸಿದರೆ ಏಳು ವರ್ಷ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ನೂತನ ವಲಸೆ ಮಸೂದೆಯನ್ನು ಸಂಸತ್ತು ಅಂಗೀಕರಿಸಿದರೆ ಭಾರತವನ್ನು ಪ್ರವೇಶಿಸಲು, ವಾಸವಾಗಿರಲು ಅಥವಾ ನಿರ್ಗಮಿಸಲು ನಕಲಿ ಪಾಸ್ಪೋರ್ಟ್ಗಳನ್ನು ಬಳಸುವವರಿಗೆ ಎರಡರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಲಾಗುವುದು.
ಕೇಂದ್ರ ಗೃಹಸಚಿವಾಲಯವು ಮಾ.11ರಂದು ಲೋಕಸಭೆಯಲ್ಲಿ ಮಂಡಿಸಿರುವ ಶಾಸನವು ಅವಧಿ ಮೀರಿ ಉಳಿದುಕೊಳ್ಳುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲು ಹೋಟೆಲ್ಗಳು, ವಿವಿಗಳು, ಇತರ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳು ವಿದೇಶಿಯರ ಕುರಿತು ಮಾಹಿತಿಗಳನ್ನು ಒದಗಿಸುವುದನ್ನೂ ಕಡ್ಡಾಯಗೊಳಿಸಲಿದೆ.
ಎಲ್ಲ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮತ್ತು ಹಡಗುಗಳು ಭಾರತದಲ್ಲಿಯ ಬಂದರು ಅಥವಾ ನಿಗದಿತ ಸ್ಥಳಗಳಲ್ಲಿ ತಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಕುರಿತು ವಿವರವಾದ ಮಾಹಿತಿಗಳನ್ನು ಸಲ್ಲಿಸಬೇಕಾಗುತ್ತದೆ.
ಮಾನ್ಯವಾದ ಪಾಸ್ಪೋರ್ಟ್ ಅಥವಾ ಇತರ ಪ್ರಯಾಣ ದಾಖಲೆಗಳಿಲ್ಲದೆ ಭಾರತದ ಯಾವುದೇ ಪ್ರದೇಶವನ್ನು ಪ್ರವೇಶಿಸುವ ಯಾವುದೇ ವಿದೇಶಿ ಪ್ರಜೆಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂದು ಹೊಸ ವಲಸೆ ಮಸೂದೆಯಲ್ಲಿ ಹೇಳಲಾಗಿದೆ.