ಬಿಹಾರ | ಸಂಭವಿಸದೆ ಇರುವ ಕೊಲೆಗಾಗಿ 18 ತಿಂಗಳು ಜೈಲು ಶಿಕ್ಷೆ, ಸಾಮಾಜಿಕ ಬಹಿಷ್ಕಾರ ಅನುಭವಿಸಿದ ಕುಟುಂಬ!
ನಾಥುನಿ ಪಾಲ್ (Photo credit: NDTV)
ಪಾಟ್ನಾ: ಬಿಹಾರದಲ್ಲಿ ಅಮಾಯಕ ಕುಟುಂಬವೊಂದು 18 ತಿಂಗಳ ಜೈಲು ಶಿಕ್ಷೆ, ಪೊಲೀಸ್ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಎದುರಿಸಿ ಕೊನೆಗೆ 16 ವರ್ಷಗಳ ಬಳಿಕ ಕಳಂಕದಿಂದ ಮುಕ್ತಗೊಂಡು ನಿಟ್ಟುಸಿರು ಬಿಟ್ಟಿದೆ. ʼಸಂಭವಿಸದೇ ಇರುವ ಕೊಲೆ ಪ್ರಕರಣʼದಲ್ಲಿ ಈ ಎಲ್ಲಾ ಯಾತನೆ ಅನುಭವಿಸಿರುವ ಕುಟುಂಬಕ್ಕೆ ಈಗ ನ್ಯಾಯ ಕೊಡುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ಒಂದೂವರೆ ವರ್ಷಗಳ ಕಾಲ ಅವರನ್ನು ಕಂಬಿ ಹಿಂದೆ ತಳ್ಳಲಾಯಿತು, ಆದರೂ ಅವರಿಗೆ ಅಗ್ನಿಪರೀಕ್ಷೆ ಕೊನೆಗೊಂಡಿರಲಿಲ್ಲ, ಅವರು ʼಕೊಲೆಗಾರರುʼ ಎಂಬ ಸಾಮಾಜಿಕ ಕಳಂಕವನ್ನು ಎದುರಿಸಿದರು. ತಮ್ಮ ನಿರಪರಾಧಿತ್ವ ಸಾಬೀತುಪಡಿಸಲು ಸುದೀರ್ಘವಾದ ಕಾನೂನು ಹೋರಾಟಕ್ಕೆ ಆರ್ಥಿಕ ಸಮಸ್ಯೆಯನ್ನು ಎದುರಿಸಿದರು, ಇದು ಅವರಿಗೆ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಿಸಿತು. ಸಾಲದಕ್ಕೆ ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಕ್ಕೆ ನಿರಂತರವಾಗಿ ಅಳೆದಾಡಿದರು ಎಂದು Times of India ವರದಿ ಮಾಡಿದೆ.
ಹೌದು, ಇದು ರೋಹ್ತಾಸ್ ಜಿಲ್ಲೆಯ ಅಕೋಧಿಗೋಳ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಿಯಾ ಗ್ರಾಮದ ಸಹೋದರರ ಕಥೆ. ವಿಮ್ಲೇಶ್, ಭಗವಾನ್, ಸತೇಂದ್ರ ಪಾಲ್ ಮತ್ತು ಅವರ ತಂದೆ ರತಿ ಲಾಲ್ ಅವರು ʼಅಪಹರಣ, ಕೊಲೆ ಮತ್ತು ಹೂತು ಹಾಕಿ ಸಾಕ್ಷಿ ನಾಶ ಪ್ರಕರಣʼದಲ್ಲಿ ಬಂಧಿತರಾಗಿ 18 ತಿಂಗಳು ಕಂಬಿ ಹಿಂದೆ ಕಳೆದಿದ್ದಾರೆ.
2008ರಲ್ಲಿ ರೋಹ್ತಾಸ್ ಪೊಲೀಸರು ನಾಥುನಿ ಪಾಲ್ (50) ಎಂಬಾತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2010ರ ಜುಲೈನಲ್ಲಿ ಪಾಟ್ನಾ ಹೈಕೋರ್ಟ್ನಿಂದ ವಿಮ್ಲೇಶ್, ಭಗವಾನ್, ಸತೇಂದ್ರ ಪಾಲ್ ಮತ್ತು ಅವರ ತಂದೆ ರತಿ ಲಾಲ್ ಜಾಮೀನು ಪಡೆದುಕೊಂಡಿದ್ದರು. ಆದರೆ, ಜನವರಿ 4ರಂದು ಉತ್ತರಪ್ರದೇಶದ ಪೊಲೀಸರು ಝಾನ್ಸಿಯ ದಮ್ನಾ ಗ್ರಾಮದ ಬಳಿ ಅಡ್ಡಾಡುತ್ತಿದ್ದ ನಾಥುನಿಯನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ಆಪಾದಿತ ಕೊಲೆಯ ರಹಸ್ಯವೇ ಬಯಲಾಗಿದೆ. ನಾಥುನಿಯನ್ನು ಬುಧವಾರ ಅವರ ಸ್ವಗ್ರಾಮ ದೇವರಿಯಾಕ್ಕೆ ಕರೆತರಲಾಗಿದೆ.
ನಾಥುನಿ ಪಾಲ್ ಕೊಲೆ ಆರೋಪ ಮತ್ತು ಪೊಲೀಸ್ ತನಿಖೆ:
ಜಮೀನು ವಿವಾದದ ಹಿನ್ನೆಲೆ ʼಮಾನಸಿಕ ಅಸ್ವಸ್ಥನಾಗಿರುವ ತನ್ನ ಸೋದರಳಿಯ ನಾಥುನಿ ಪಾಲ್ ನನ್ನು ತನ್ನ ಸೋದರ ಸಂಬಂಧಿಗಳಾದ ವಿಮಲೇಶ್, ಭಗವಾನ್, ಸತೇಂದ್ರ ಪಾಲ್ ಮತ್ತು ಚಿಕ್ಕಪ್ಪ ರತಿ ಲಾಲ್ ಅವರು ಅಪಹರಿಸಿ ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು 2008ರ ಸೆಪ್ಟೆಂಬರ್ 18ರಂದು ಬಾಬು ಲಾಲ್ ಎಂಬುವರು ಲಿಖಿತ ದೂರನ್ನು ನೀಡಿದ್ದರು.
ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರು ಸಹೋದರರಾದ ವಿಮಲೇಶ್, ಭಗವಾನ್ , ಸತೇಂದ್ರ ಪಾಲ್ ಮತ್ತು ಅವರ ತಂದೆ ರತಿ ಲಾಲ್ ಅವರನ್ನು ಬಂಧಿಸಿದ್ದರು. ಆರೋಪಿಗಳ ಇನ್ನೋರ್ವ ಸಹೋದರ ಜೀತೇಂದ್ರ ಪಾಲ್ ಪೊಲೀಸ್ ಕಾನ್ ಸ್ಟೆಬಲ್ ಆಗಿದ್ದು, ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಕರ್ತವ್ಯದಲ್ಲಿದ್ದ ಕಾರಣ ಪ್ರಕರಣದಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಕಾಲುವೆಗಳು ಮತ್ತು ಇತರ ಸ್ಥಳಗಳನ್ನು ಅಗೆದು ಪೊಲೀಸರು ವ್ಯಾಪಕವಾದ ಹುಡುಕಾಟವನ್ನು ನಡೆಸಿದರೂ ಮೃತದೇಹ ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ 6 ತಿಂಗಳ ಬಳಿಕ ಆರೋಪ ಪಟ್ಟಿ ಸಲ್ಲಿಸಿದ್ದರು. ನಂತರ ನಾಲ್ವರನ್ನು ಬಂಧಿಸಿ ಕಂಬಿ ಹಿಂದೆ ಹಾಕಲಾಗಿತ್ತು.
ಘಟನೆ ಬಳಿಕ ಆರೋಪಿಗಳ ಕುಟುಂಬವು ಸಾಮಾಜಿಕ ಬಹಿಷ್ಕಾರವನ್ನು ಅನುಭವಿಸಿದೆ. ಗ್ರಾಮದ ಸಾರ್ವಜನಿಕ ಪಂಪ್ ಬಳಸದಂತೆ, ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡದಂತೆ ಗ್ರಾಮಸ್ಥರು ಅವರಿಗೆ ನಿರ್ಬಂಧ ವಿಧಿಸಿದ್ದರು. 2010 ರಲ್ಲಿ ರತಿ ಲಾಲ್ ಜೈಲಿನಿಂದ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಕಳಂಕದ ನೋವಿನಲ್ಲಿ ನಿಧನರಾಗಿದ್ದಾರೆ. ನಂತರ ಅವರ ಪತ್ನಿ ಕೂಡ ನಿಧನರಾಗಿದ್ದಾರೆ.
ಕೊಲೆ ಪ್ರಕರಣಕ್ಕೆ ತಿರುವು
ಉತ್ತರ ಪ್ರದೇಶದ ದಮ್ನಾ ಪೊಲೀಸ್ ಔಟ್ ಪೋಸ್ಟ್ ನ ಉಸ್ತುವಾರಿ ನವಾಬ್ ಸಿಂಗ್ ಜನವರಿ 4ರಂದು ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಪತ್ತೆ ಮಾಡಿದ್ದು, ಕೊಲೆ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ರೋಹ್ತಾಸ್ ಪೊಲೀಸರು ಅನುಮಾನಾಸ್ಪದ ವ್ಯಕ್ತಿಯನ್ನು ವಿಚಾರಿಸಿದಾಗ ಆತ 16 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ ಎನ್ನಲಾದ ನಾಥುನಿ ಎಂದು ತಿಳಿದು ಬಂದಿದೆ. ಈ ಮೂಲಕ 16 ವರ್ಷಗಳ ಹಿಂದೆ ಇಂತದ್ದೊಂದು ಕೊಲೆ ಪ್ರಕರಣವೇ ನಡೆದಿಲ್ಲ ಎನ್ನುವುದು ಬಯಲಾಗಿದೆ.
ಇದರಿಂದಾಗಿ ಹವಾಲ್ದಾರ್ ಆಗಿರುವ ಜೀತೇಂದ್ರ ಅವರ ಕುಟುಂಬ ಸಾಮಾಜಿಕ ಕಳಂಕದಿಂದ ಮುಕ್ತವಾಗಿ ಸಮಾಧಾನ ವ್ಯಕ್ತಪಡಿಸಿದೆ. ಎಸ್ ಎಚ್ ಒನಿಂದ ಹಿಡಿದು ಡಿಐಜಿವರೆಗೆ ನಾವು ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದರೂ, ನಮ್ಮನ್ನು ತಪ್ಪಿತಸ್ಥರೆಂದು ಚಿತ್ರೀಕರಿಸಲಾಯಿತು. ಕಳೆದುಹೋದ ತನ್ನ ಸೋದರಸಂಬಂಧಿ ನಾಥುನಿಗಾಗಿ ನಾನು ಹುಡುಕಾಟ ನಡೆಸಿದ್ದೇನೆ ಎಂದು ಜೇತೇಂದ್ರ ಹೇಳಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಭಗವಾನ್ ಪಾಲ್ ತಾನು ಅನುಭವಿಸಿದ ಕ್ರೌರ್ಯದ ಬಗ್ಗೆ ಮಾತನಾಡುತ್ತಾ, ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ನನ್ನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ. ಘಟನೆಯ ಕಳಂಕ ಸೇರಿಕೊಂಡ 16 ವರ್ಷಗಳ ನಂತರವೂ ಕುಟುಂಬ ತಮ್ಮ ಗ್ರಾಮದಲ್ಲಿ ಅವಮಾನವನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಬಗ್ಗೆ ರೋಹ್ತಾಸ್ ಪೊಲೀಸ್ ವರಿಷ್ಠಾಧಿಕಾರಿ ರೋಷನ್ ಕುಮಾರ್ ಪ್ರತಿಕ್ರಿಯಿಸಿದ್ದು, ಚರ್ಚೆಯ ನಂತರ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.