ಫೆಬ್ರವರಿ 13ರಂದು ರೈತರ ‘ದಿಲ್ಲಿ ಚಲೋ’ ಪ್ರತಿಭಟನೆ
ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ನಿಷೇಧಾಜ್ಞೆ
Photo: PTI
ಹೊಸದಿಲ್ಲಿ : ಫೆಬ್ರವರಿ 13ರಂದು ದಿಲ್ಲಿಯಲ್ಲಿ ನಡೆಯಲು ನಿಗದಿಯಾಗಿರುವ ಇನ್ನೊಂದು ರೈತ ಪ್ರತಿಭಟನೆಗೆ ಮುಂಚಿತವಾಗಿ, ದಿಲ್ಲಿ ಪೊಲೀಸರು ರವಿವಾರ ಉತ್ತರಪ್ರದೇಶದ ಜೊತೆಗಿನ ಗಡಿಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ)ನ 144ನೇ ವಿಧಿಯಂತೆ ನಿಷೇಧಾಜ್ಞೆ ಹೇರಿದ್ದಾರೆ. ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ಮತ್ತು ಯಾವುದೇ ಅನುಚಿತ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘‘ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ) ಸಂಬಂಧ ಕಾನೂನು ಮಾಡಬೇಕು ಎನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಫೆಬ್ರವರಿ 13ರಂದು ದಿಲ್ಲಿಗೆ ಮೆರವಣಿಗೆ ಹೋಗುವಂತೆ ಕೆಲವು ರೈತ ಸಂಘಟನೆಗಳು ತಮ್ಮ ಬೆಂಬಲಿಗರಿಗೆ ಕರೆ ನೀಡಿವೆ ಎನ್ನುವ ಮಾಹಿತಿ ನಮಗೆ ಬಂದಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೆ ಅವರು ದಿಲ್ಲಿ ಗಡಿಯಲ್ಲಿ ಧರಣಿ ನಡೆಸುವ ಸಾಧ್ಯತೆಗಳಿವೆ. ಯಾವುದೇ ಅನುಚಿತ ಘಟನೆಗಳನ್ನು ತಡೆಯಲು ಹಾಗೂ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ಮುಂಜಾಗರೂಕತಾ ಕ್ರಮವಾಗಿ ಸಿಆರ್ಪಿಸಿಯ 144ನೇ ವಿಧಿಯಂತೆ ನಿಷೇಧಾಜ್ಞೆಯನ್ನು ಹೇರಲಾಗಿದೆ. ಪ್ರಾಣಗಳನ್ನು ಉಳಿಸಲು ಮತ್ತು ಆಸ್ತಿಗಳನ್ನು ರಕ್ಷಿಸಲು ಈ ಕ್ರಮ ಅಗತ್ಯವಾಗಿದೆ’’ ಎಂದು ದಿಲ್ಲಿ ಪೊಲೀಸರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶದ ಪ್ರಕಾರ, ದಿಲ್ಲಿ ಮತ್ತು ಉತ್ತರಪ್ರದೇಶ ನಡುವಿನ ಗಡಿ ಮತ್ತು ಸಮೀಪದ ಸ್ಥಳಗಳಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
‘‘ಉತ್ತರಪ್ರದೇಶದಿಂದ ಪ್ರತಿಭಟನಕಾರರನ್ನು ತುಂಬಿಕೊಂಡು ಟ್ರ್ಯಾಕ್ಟರ್ಗಳು, ಟ್ರಾಲಿಗಳು, ಬಸ್ಗಳು, ಟ್ರಕ್ಗಳು, ವಾಣಿಜ್ಯ ವಾಹನಗಳು, ಖಾಸಗಿ ವಾಹನಗಳು, ಕುದುರೆಗಳು ದಿಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನಕಾರರು ದಿಲ್ಲಿ ಪ್ರವೇಶಿಸುವುದನ್ನು ತಡೆಯಲು ಈಶಾನ್ಯ ದಿಲ್ಲಿ ಪೊಲೀಸರು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು” ಎಂದು ಆದೇಶ ಹೇಳುತ್ತದೆ.
2020ರಲ್ಲಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಮುಖ್ಯವಾಗಿ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ರೈತರು ಭಾರೀ ಸಂಖ್ಯೆಯಲ್ಲಿ ದಿಲ್ಲಿಯ ಸಿಂಘು, ತಿಕ್ರಿ ಮತ್ತು ಘಾಝಿಪುರ ಗಡಿಗಳಲ್ಲಿ ಜಮಾಯಿಸಿದ್ದರು. ಬಳಿಕ ದಿಲ್ಲಿಯತ್ತ ಮೆರವಣಿಗೆ ಹೋಗುವುದಕ್ಕಾಗಿ ಅವರು ಪೊಲೀಸ್ ತಡೆಬೇಲಿಗಳನ್ನು ಮುರಿದಿದ್ದರು.
ರೈತರ ಬೇಡಿಕೆಗಳೇನು?
ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ)ಯನ್ನು ಖಾತರಿಪಡಿಸುವ ಕಾನೂನೊಂದನ್ನು ತರಬೇಕು ಎನ್ನುವುದು ಪ್ರತಿಭಟನೆಗೆ ಕರೆ ನೀಡಿರುವ ರೈತರ ಪ್ರಮುಖ ಬೇಡಿಕೆಯಾಗಿದೆ. 2021ರಲ್ಲಿ, ಕೃಷಿ ಕಾನೂನುಗಳ ವಿರುದ್ಧದ ತಮ್ಮ ಬೃಹತ್ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲು ಒಪ್ಪಿದಾಗ ರೈತರು ಹಾಕಿದ ಷರತ್ತುಗಳಲ್ಲಿ ಇದೂ ಒಂದಾಗಿತ್ತು.
ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ರೈತರ ವಿರುದ್ಧದ ಪೊಲೀಸ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಮತ್ತು ಲಖಿಮ್ಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎನ್ನುವುದು ರೈತರ ಇತರ ಬೇಡಿಕೆಗಳಾಗಿವೆ.