ರೈತರ ಪ್ರತಿಭಟನೆ: ಅಂಬಾಲದಲ್ಲಿ 180 ರೈಲುಗಳ ಸಂಚಾರ ರದ್ದು
Photo : PTI
ಅಂಬಾಲ: ರೈತರ ‘ರೈಲ್ ರೋಕೋ’ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹರ್ಯಾಣದ ಅಂಬಾಲದಲ್ಲಿ ಶನಿವಾರ ಸುಮಾರು 180 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಯಿತು.
ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ, ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ಹಾಗೂ ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲಿ ಸಾಲ ಮನ್ನಾಕ್ಕೆ ಸರಕಾರವನ್ನು ಆಗ್ರಹಿಸಿ ರೈತರು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಪಂಜಾಬ್ ಹಾಗೂ ಹರ್ಯಾಣದಲ್ಲಿ ನೂರಾರು ರೈಲು ಪ್ರಯಾಣಿಕರು ಪರದಾಡಬೇಕಾಯಿತು. ನಮ್ಮ ಗಮ್ಯ ಸ್ಥಾನವನ್ನು ತಲುಪಲು ಇತರ ಸಾರಿಗೆಗೆ ಮುಂಗಡ ಕಾಯ್ದಿರಿಸಲು ಹೆಚ್ಚು ಖರ್ಚು ಮಾಡಬೇಕಾಗಿದೆ ಎಂದು ಅಂಬಾಲಾ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಪ್ರಯಾಣಿಕರು ತಿಳಿಸಿದ್ದಾರೆ.
ತಾನು ರೈಲು ಪ್ರಯಾಣಕ್ಕೆ 800 ರೂ. ಖರ್ಚು ಮಾಡಬೇಕಾಗಿತ್ತು. ಈಗ ರೈಲು ರದ್ದಾಗಿರುವುದರಿಂದ ಟ್ಯಾಕ್ಸಿಗೆ 14000 ರೂ. ಖರ್ಚು ಮಾಡಬೇಕಾಗಿದೆ ಎಂದು ಓರ್ವ ಪ್ರಯಾಣಿಕ ತಿಳಿಸಿದ್ದಾರೆ.
ರದ್ದುಗೊಳಿಸಲಾದ ರೈಲುಗಳ ಟಿಕೆಟ್ ಮೊತ್ತವನ್ನು ಹಿಂದಿರುಗಿಸಲು ಅಂಬಾಲ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಕೌಂಟರ್ಗಳನ್ನು ಆರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ನವೀನ್ ಕುಮಾರ್ ಹೇಳಿದ್ದಾರೆ.
ಫರೀದ್ಕೋಟ್, ಸಮ್ರಾಲಾ, ಮೊಗಾ, ಹೋಶಿಯಾರ್ಪುರ, ಗುರುದಾಸ್ಪುರ, ಜಲಂಧರ್, ತರಣ್ತರಣ್, ಸಂಗ್ರೂರು, ಪಟಿಯಾಲ, ಫಿರೋಜ್ಪುರ, ಬಠಿಂಡಾ ಮತ್ತು ಅಮೃತಸರದ ಹಲವು ಸ್ಥಳಗಳಲ್ಲಿ ರೈತರು ತಮ್ಮ ಮೂರು ದಿನಗಳ ಪ್ರತಿಭಟನೆಯ ಭಾಗವಾಗಿ ಗುರುವಾರದಿಂದ ರೈಲುಗಳಿಗೆ ಮುತ್ತಿಗೆ ಹಾಕಲು ಆರಂಭಿಸಿದ್ದರು.