ಪಂಜಾಬ್ ನಲ್ಲಿ ಮಾಜಿ ರಾಯಭಾರಿ, ಬಿಜೆಪಿ ಅಭ್ಯರ್ಥಿ ತರಣ್ಜಿತ್ ಸಿಂಗ್ ಸಂಧು ವಿರುದ್ಧ ರೈತರ ಪ್ರತಿಭಟನೆ
ತರಣ್ಜಿತ್ ಸಿಂಗ್ | Photo : NDTV
ಚಂಡಿಗಢ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸುತ್ತಿರುವ ಅಮೆರಿಕಕ್ಕಿದ್ದ ಭಾರತದ ಮಾಜಿ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅಮೃತಸರ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ ಸಂದರ್ಭ ರೈತರಿಂದ ತೀವ್ರ ಪ್ರತಿಭಟನೆ ಎದುರಿಸಿದ್ದಾರೆ.
ಅಮೃತಸರ ಜಿಲ್ಲೆಯ ಎರಡು ಗ್ರಾಮಗಳಿಗೆ ಚುನಾವಣಾ ಪ್ರಚಾರಕ್ಕಾಗಿ ಭೇಟಿ ನೀಡಿದ ಸಂದರ್ಭ ಅವರ ಬೆಂಗಾವಲು ವಾಹನ ರೈತರ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಬೀದಿಯ ಎರಡೂ ಬದಿಗಳಲ್ಲಿ ನಿಂತ ರೈತರು ಕರಿ ಪತಾಕೆ ಪ್ರದರ್ಶಿಸಿದರು ಹಾಗೂ ಸಂಧು ಅವರ ಬೆಂಗಾವಲು ವಾಹನ ಹಾದು ಹೋಗುತ್ತಿದ್ದಂತೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
‘‘ಪ್ರಜಾಪ್ರಭುತ್ವ ಪ್ರತಿಯೋರ್ವನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಅದೇ ಪ್ರಜಾಪ್ರಭುತ್ವ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡಿದೆ. ಅಲ್ಲದೆ, ನನಗೆ ಚುನಾವಣಾ ಪ್ರಚಾರ ನಡೆಸಲು ಕೂಡ ಅವಕಾಶ ನೀಡಿದೆ. ರೈತರ ಆದಾಯವನ್ನು ಹೆಚ್ಚಿಸಲು ನಾವು ಯೋಚಿಸುತ್ತಿದ್ದೇವೆ’’ ಎಂದು ಸಂಧು ಅವರು ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅಜ್ನಾಲಾ ತೆಹ್ಸಿಲ್ ಗಂಗೋಮಹಲ್ ಹಾಗೂ ಕಲ್ಲೋಮಹಲ್ನಲ್ಲಿ ರೋಡ್ ಶೋ ನಡೆದ ಸಂದರ್ಭ ರೈತರು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರಕಾರ ಈಗ ಹಿಂಪಡೆದುಕೊಂಡಿರುವ ಕೃಷಿ ಕಾಯ್ದೆಯ ವಿರುದ್ಧ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ ಕರೆಯ ಭಾಗವಾಗಿ ಪಂಜಾಬ್ ನ ಗ್ರಾಮಗಳಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.
‘‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬಯಸಿದೆ. ಅದು ಈಗ ಪ್ರಚಾರ ನಡೆಸುತ್ತಿದೆ. ನಮ್ಮ ಗ್ರಾಮದಲ್ಲಿ ಅವರು ಪ್ರಚಾರ ನಡೆಸಲು ಅವಕಾಶ ನೀಡಬಾರದು. ನಾವು ಯಾವುದೇ ಕಾರಣಕ್ಕೂ ಅದನ್ನು ವಿರೋಧಿಸಬೇಕು’’ ಎಂದು ಓರ್ವ ರೈತ ಹೇಳಿದ್ದಾರೆ.
ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿದ್ದ ತರಣ್ಜಿತ್ ಸಿಂಗ್ ಸಂಧು ಫೆಬ್ರವರಿ 1ರಂದು ನಿವೃತ್ತರಾಗಿದ್ದರು. ಅವರು ಮಾರ್ಚ್ 20ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು.