ರೈತರ ಪ್ರತಿಭಟನೆ: 5 ರಾಜ್ಯಗಳಲ್ಲಿ 38 ಸ್ಥಾನ ಕಳೆದುಕೊಂಡ ಬಿಜೆಪಿ
PC : PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ, ರೈತರ ಪ್ರತಿಭಟನೆಗಳು ನಡೆದಿರುವ ರಾಜ್ಯಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ನರೇಂದ್ರ ಮೋದಿ ಸರಕಾರವು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿತು. ಹಾಗಾಗಿ, ವಿವಿಧ ರಾಜ್ಯಗಳಲ್ಲಿ ತಾನು 2019ರಲ್ಲಿ ಗೆದ್ದಿದ್ದ ಕ್ಷೇತ್ರಗಳನ್ನು ಬಿಜೆಪಿಯು ಕಳೆದುಕೊಂಡಿತು. ಎಲ್ಲಕ್ಕಿಂತ ಹೆಚ್ಚಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡ ಜಾರ್ಖಂಡ್ನಲ್ಲಿ ದೊಡ್ಡ ಅಂತರದಿಂದ ಸೋತರು.
ಪಶ್ಚಿಮ ಉತ್ತರಪ್ರದೇಶ, ಪಂಜಾಬ್, ಹರ್ಯಾಣ, ಉತ್ತರ ರಾಜಸ್ಥಾನ ಮತ್ತು ಮಹಾರಾಷ್ಟ್ರದ ನೀರುಳ್ಳಿ ಬೆಳೆಯುವ ವಲಯ ಮುಂತಾದ ರೈತ ಪ್ರತಿಭಟನೆಯ ಪ್ರದೇಶಗಳಲ್ಲಿ ಬಿಜೆಪಿಯು 38 ಸ್ಥಾನಗಳನ್ನು ಕಳೆದುಕೊಂಡಿದೆ. ಹೆಚ್ಚಿನ ಸ್ಥಳಗಳಲ್ಲಿ ಬಿಜೆಪಿ ನಾಯಕರಿಗೆ ಪ್ರಚಾರ ನಡೆಸಲು ಕೂಡ ಸಾಧ್ಯವಾಗಿರಲಿಲ್ಲ.
ರೈತರು ತಮ್ಮ ಪ್ರತಿಭಟನೆಯನ್ನು ಫೆಬ್ರವರಿಯಲ್ಲಿ ಪುನರಾರಂಭಿಸಿದರು. ದಿಲ್ಲಿಗೆ ಹೋಗುವ ಯಾತ್ರೆಯನ್ನು ಕೈಗೊಂಡಿದ್ದ ಅವರನ್ನು ಪಂಜಾಬ್-ಹರ್ಯಾಣ ಗಡಿಯಲ್ಲಿ ತಡೆಯಲಾಯಿತು. ಹರ್ಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರಿಗೆ ರಾಜಧಾನಿ ಪ್ರವೇಶವನ್ನು ನಿರ್ಬಂಧಿಸಲಾಯಿತು. ರೈತರ ಪ್ರತಿಭಟನೆಯ ಪರಿಣಾಮವು ಇತರ ರಾಜ್ಯಗಳಲ್ಲೂ ಬಿಜೆಪಿ ತಟ್ಟಿದೆ ಎಂದು ಪರಿಣತರು ಹೇಳುತ್ತಾರೆ.