ರೈತರ ಪ್ರತಿಭಟನೆ: ಹರ್ಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ನಿಷೇಧ ವಿಸ್ತರಣೆ, ಪ್ರಮುಖ ಎಕ್ಸ್ ಖಾತೆಗಳಿಗೆ ತಡೆ
ರೈತರು ಸಂಚಾರದ ಮತ್ತು ಸಭೆ ಸೇರುವ ಹಕ್ಕನ್ನು ಹೊಂದಿದ್ದಾರೆ ಎಂದ ಚಂಡೀಗಡ ಹೈಕೋರ್ಟ್
Photo: PTI
ಹೊಸದಿಲ್ಲಿ: ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರವು ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ಸಗಟು ಸಂದೇಶ ರವಾನೆಯ ಮೇಲೆ ನಿಷೇಧವನ್ನು ಫೆ.15ರವರೆಗೆ ವಿಸ್ತರಿಸಿದೆ. ಇದೇ ವೇಳೆ ಪಂಜಾಬ್ ಮತ್ತು ಚಂಡೀಗಡ ಉಚ್ಚ ನ್ಯಾಯಾಲಯವು ರೈತರು ದಿಲ್ಲಿಯನ್ನು ತಲುಪುವುದನ್ನು ತಡೆಯಲು ಇಂಟರ್ನೆಟ್ ಸ್ಥಗಿತ ಮತ್ತು ಇತರ ನಿಷೇಧ ಕ್ರಮಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ರೈತರ ದಿಲ್ಲಿ ಚಲೋ ಆಂದೋಲನದ ಸ್ಥಿತಿಗತಿಯನ್ನು ತಿಳಿಸುತ್ತಿದ್ದ ಹಲವಾರು ಎಕ್ಸ್ ಖಾತೆಗಳನ್ನು ಅಪಾರದರ್ಶಕ ಕ್ರಮವೊಂದರಲ್ಲಿ ತಡೆಹಿಡಿಯಲಾಗಿದೆ.
ರೈತರು ಸಂಚಾರದ ಮತ್ತು ಸಭೆ ಸೇರುವ ಹಕ್ಕನ್ನು ಹೊಂದಿದ್ದಾರೆ ಎಂದು ಬೆಟ್ಟು ಮಾಡಿರುವ ಉಚ್ಚ ನ್ಯಾಯಾಲಯವು, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಲು ಅವರಿಗೇಕೆ ಅವಕಾಶ ನೀಡಬಾರದು ಎಂದು ಪ್ರಶ್ನಿಸಿದೆ.
ಪಂಚಕುಲಾದ ವಕೀಲ ಉದಯ ಪ್ರತಾಪ ಸಿಂಗ್ ಅವರು ದಿಲ್ಲಿಯ ಗಡಿಗಳನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಈ ಪಿಐಎಲ್ನ್ನು ಸಲ್ಲಿಸಿದ್ದಾರೆ.
ಪೋಲಿಸರು ರೈತರು ದಿಲ್ಲಿ ತಲುಪುವುದನ್ನು ತಡೆಯಲು ರಸ್ತೆಗಳಲ್ಲಿ ಸಿಮೆಂಟ್ ಬ್ಯಾರಿಕೇಡ್ಗಳು,ಮುಳ್ಳುತಂತಿಗಳು ಇತ್ಯಾದಿಗಳನ್ನು ಅಳವಡಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ.
ನ್ಯಾಯಾಲಯವು ದಿಲ್ಲಿ ಸರಕಾರವನ್ನು ಅರ್ಜಿಯಲ್ಲಿ ಕಕ್ಷಿಯನ್ನಾಗಿ ಸೇರಿಸಿದ್ದು, ಹರ್ಯಾಣ, ಪಂಜಾಬ್ ಸರಕಾರಗಳು ಮತ್ತು ಚಂಡಿಗಡ ಆಡಳಿತದಿಂದ ಉತ್ತರವನ್ನು ಕೇಳಿದೆ. ದಿಲ್ಲಿ ಚಲೋ ಆಂದೋಲನದ ನೇತೃತ್ವವನ್ನು ವಹಿಸಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ ಮೋರ್ಚಾಗಳನ್ನೂ ಕಕ್ಷಿಗಳನ್ನಾಗಿ ಮಾಡಲಾಗಿದೆ.
ಪಾರದರ್ಶಕವಾಗಿದ್ದ ಟ್ವಿಟರ್ ಈಗ ಅಪಾರದರ್ಶಕ ಎಕ್ಸ್:
2020-21ರಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಸಂದರ್ಭದಲ್ಲಿ ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮ (ಟ್ವಿಟರ್) ಈಗ ಅಪಾರದರ್ಶಕವಾಗಿರುವುದರ ಮೇಲೆ ನ್ಯಾಯವಾದಿ ಹಾಗೂ ಇಂಟರ್ನೆಟ್ ಫ್ರೀಡಂ ಫೌಂಡೇಷನ್ನ ಮಾಜಿ ಮುಖ್ಯಸ್ಥ ಅಪಾರ ಗುಪ್ತಾ ತನ್ನ ಎಕ್ಸ್ ಪೋಸ್ಟ್ನಲ್ಲಿ ಬೆಳಕು ಚೆಲ್ಲಿದ್ದಾರೆ. ಆಗ ಅದನ್ನು ಟ್ವಿಟರ್ ಎಂದು ಕರೆಯಲಾಗುತ್ತಿತ್ತು ಮತ್ತು ಜಾಕ್ ಡೋರ್ಸೆ ಅದನ್ನು ನಡೆಸುತ್ತಿದ್ದರು. 2022,ಅಕ್ಟೋಬರ್ನಲ್ಲಿ ಅದನ್ನು ಖರೀದಿಸಿದ ಎಲಾನ್ ಮಸ್ಕ್ ಎಕ್ಸ್ ಎಂದು ಮರುನಾಮಕರಣ ಮಾಡಿದ್ದಾರೆ. ಅಲ್ಲಿಂದೀಚೆಗೆ ಮಸ್ಕ್ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದರೂ ಸ್ಥಳೀಯ ಕಾನೂನುಗಳ ತುಷ್ಟೀಕರಣದ ಗುರಿಯನ್ನು ಹೊಂದಿರುವ ನೀತಿಗಳಿಗೆ ಅಂಟಿಕೊಂಡಿದ್ದಾರೆ ಎಂದಿದ್ದಾರೆ.
ಈಗ ಪರಿಸ್ಥಿತಿ ಬದಲಾಗಿದೆ. ಪ್ರಮುಖ ರೈತನಾಯಕರ ಎಕ್ಸ್ ಖಾತೆಗಳನ್ನು ತಡೆಹಿಡಿಯುವಂತೆ ಆದೇಶಗಳನ್ನು ಮುಂಚಿತವಾಗಿಯೇ ಹೊರಡಿಸಲಾಗಿದೆ. ಇಂತಹ ಪೂರ್ವ ಸೆನ್ಸಾರ್ಶಿಪ್ ಯಾವುದೇ ಪಾರದರ್ಶಕತೆ ಅಥವಾ ನೈಸರ್ಗಿಕ ನ್ಯಾಯವನ್ನು ಹೊಂದಿಲ್ಲ ಎಂದೂ ಗುಪ್ತಾ ಬರೆದಿದ್ದಾರೆ.