ರೈತರ ಪ್ರತಿಭಟನೆ: ಮಾ. 12ರವರೆಗೆ ದಿಲ್ಲಿಯಲ್ಲಿ ಸಭೆ ಸೇರುವುದನ್ನು ನಿಷೇಧಿಸಿದ ದಿಲ್ಲಿ ಪೊಲೀಸ್
Photo : PTI
ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ಮಾರ್ಚ್ 12ರವರೆಗೆ ದೊಡ್ಡ ಸಭೆಗಳನ್ನು ನಡೆಸುವುದನ್ನು ಮತ್ತು ರಾಷ್ಟ್ರ ರಾಜಧಾನಿಗೆ ಟ್ರ್ಯಾಕ್ಟರ್ಗಳು ಮತ್ತು ಟ್ರಾಲಿಗಳು ಪ್ರವೇಶಿಸುವುದನ್ನು ದಿಲ್ಲಿ ಪೊಲೀಸರು ಸೋಮವಾರ ನಿಷೇಧಿಸಿದ್ದಾರೆ.
ಮಂಗಳವಾರ ದಿಲ್ಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಗಳಿಗೆ ಒಂದು ದಿನ ಮೊದಲು ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ)ಗೆ ಕಾನೂನು ತರಬೇಕು ಎನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ 200ಕ್ಕೂ ಅಧಿಕ ರೈತರ ಸಂಘಟನೆಗಳು ದಿಲ್ಲಿಗೆ ರೈತರ ಮೆರವಣಿಗೆ ಒಯ್ಯಲು ನಿರ್ಧರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ)ಯನ್ನು ಖಾತರಿಪಡಿಸುವ ಕಾನೂನೊಂದನ್ನು ತರಬೇಕು ಎನ್ನುವುದು ಪ್ರತಿಭಟನೆಗೆ ಕರೆ ನೀಡಿರುವ ರೈತರ ಪ್ರಮುಖ ಬೇಡಿಕೆಯಾಗಿದೆ. 2021ರಲ್ಲಿ, ಕೃಷಿ ಕಾನೂನುಗಳ ವಿರುದ್ಧದ ತಮ್ಮ ಬೃಹತ್ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲು ಒಪ್ಪಿದಾಗ ರೈತರು ಹಾಕಿದ ಷರತ್ತುಗಳಲ್ಲಿ ಇದೂ ಒಂದಾಗಿತ್ತು.
ಸರಕಾರ ಸ್ವಾಧೀನಪಡಿಸುವ ರೈತರ ಜಮೀನುಗಳಿಗೆ ಗರಿಷ್ಠ ಪರಿಹಾರ ನೀಡಬೇಕು ಎನ್ನುವುದು ರೈತರ ಇನ್ನೊಂದು ಪ್ರಮುಖ ಬೇಡಿಕೆಯಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ರೈತರ ವಿರುದ್ಧದ ಪೊಲೀಸ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಮತ್ತು ಲಖಿಮ್ಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎನ್ನುವುದು ಅವರ ಇತರ ಬೇಡಿಕೆಗಳಾಗಿವೆ.
ರಾಜಕೀಯ, ಸಾಮಾಜಿಕ ಅಥವಾ ಇತರ ಯಾವುದೇ ಕಾರಣಗಳಿಗಾಗಿ ಮೆರವಣಿಗೆಗಳು, ಪ್ರದರ್ಶನಗಳು, ಸಭೆಗಳು ಅಥವಾ ಕಾಲ್ನಡಿಗೆ ಜಾಥಾಗಳಲ್ಲಿ ಪಾಲ್ಗೊಳ್ಳುವುದನ್ನು ಅಥವಾ ಅವುಗಳನ್ನು ಸಂಘಟಿಸುವುದನ್ನು ‘‘ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ’’ ಎಂದು ದಿಲ್ಲಿ ಪೊಲೀಸ್ ಕಮಿಶನರ್ ಸಂಜಯ್ ಅರೋರ ಸೋಮವಾರ ಬಿಡುಗಡೆ ಮಾಡಿರುವ ಆದೇಶ ತಿಳಿಸಿದೆ.
‘‘ದಿಲ್ಲಿ/ಹೊಸದಿಲ್ಲಿಗೆ ಪ್ರವೇಶಿಸುವ ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಂದ ವ್ಯಾಪಕ ಉದ್ವಿಗ್ನತೆ, ಸಾರ್ವಜನಿಕ ತೊಂದರೆ, ಸಾಮಾಜಿಕ ಅಶಾಂತಿ ಮತ್ತು ಹಿಂಸೆಯ ಅಪಾಯವಿದೆ’’ ಎಂದು ಆದೇಶ ತಿಳಿಸಿದೆ.
‘‘ಎಲ್ಲಕ್ಕಿಂತ ಮುಖ್ಯವಾಗಿ, 2020ರ ರೈತ ಆಂದೋಲನದ ಮತ್ತು ಅದರಿಂದ ಹುಟ್ಟಿಕೊಂಡ ಗಂಭೀರ ಕಾನೂನು ಮತ್ತು ವ್ಯವಸ್ಥೆ ಸಮಸ್ಯೆಯ ಅನುಭವ ಹಾಗೂ ಗುಪ್ತಚರ ಸಂಸ್ಥೆಗಳಿಂದ ಸ್ವೀಕರಿಸಿದ ಮಾಹಿತಿಗಳನ್ನು ಆಧರಿಸಿ, ಹಿಂದಿನ ಪರಿಸ್ಥಿತಿಯು ಮರುಕಳಿಸದಂತೆ ತಡೆಯಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ’’ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದಕ್ಕಿಂತ ಒಂದು ದಿನ ಮೊದಲು, ಅಂದರೆ ರವಿವಾರ ದಿಲ್ಲಿ ಪೊಲೀಸರು ಉತ್ತರಪ್ರದೇಶದ ಜೊತೆಗಿನ ಗಡಿಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ)ನ 144ನೇ ವಿಧಿಯಂತೆ ನಿಷೇಧಾಜ್ಞೆ ಹೇರಿದ್ದರು.
2020ರಲ್ಲಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಮುಖ್ಯವಾಗಿ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ರೈತರು ಭಾರೀ ಸಂಖ್ಯೆಯಲ್ಲಿ ದಿಲ್ಲಿಯ ಸಿಂಘು, ತಿಕ್ರಿ ಮತ್ತು ಘಾಝಿಪುರ ಗಡಿಗಳಲ್ಲಿ ಒಂದು ವರ್ಷ ಕಾಲ ಧರಣಿ ನಡೆಸಿದ್ದರು. ಅಂತಿಮವಾಗಿ, ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದುಕೊಂಡಿತ್ತು.
ಬ್ರಿಟಿಷರ ಕಾಲದ ದಮನಕ್ಕಿಂತಲೂ ಬರ್ಬರ : ಆಪ್
ಪ್ರತಿಭಟನಾನಿರತ ರೈತರ ಜೊತೆ ಮಾತುಕತೆಗಳನ್ನು ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷ (ಆಪ್)ದ ದಿಲ್ಲಿ ಸಂಚಾಲಕ ಗೋಪಾಲ್ ರೈ ಸೋಮವಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ದಿಲ್ಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಮೆರವಣಿಗೆಯನ್ನು ದಮನಿಸಲು ಕೇಂದ್ರ ಸರಕಾರ ತೆಗೆದುಕೊಂಡಿರುವ ಕ್ರಮಗಳು ವಸಾಹತುಶಾಹಿ ಕಾಲದ ಕ್ರಮಗಳಿಗಿಂತಲೂ ಬರ್ಬರವಾಗಿವೆ ಎಂದು ಆರೋಪಿಸಿದರು.
‘‘ಎಲ್ಲರಿಗೂ ಆಹಾರ ಕೊಡುವ ಕೆಲಸವನ್ನು ರೈತರು ಮಾಡುತ್ತಾರೆ. ಅವರು ಫೆಬ್ರವರಿ 13ರಂದು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಅದನ್ನು ದಮನಿಸಲು ಕೇಂದ್ರ ಸರಕಾರವು ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕ್ರಮಗಳು ಬ್ರಿಟಿಷರ ಕಾಲದ ಕ್ರಮಗಳಿಗಿಂತಲೂ ಬರ್ಬರವಾಗಿವೆ’’ ಎಂದು ರೈ ಆರೋಪಿಸಿದರು.