ಕುನಾಲ್ ಕಾಮ್ರಾ ಹಾಡಿದ ವಿಡಂಬನಾ ಗೀತೆ ಮೂಲಕ ಶಿಂಧೆಯನ್ನು ʼಸ್ವಾಗತಿಸಲುʼ ಸಿದ್ಧರಾದ ಮಹಾರಾಷ್ಟ್ರ ರೈತರು!
ಶಕ್ತಿಪೀಠ ಎಕ್ಸ್ಪ್ರೆಸ್ವೇ ಹೆದ್ದಾರಿಯನ್ನು ವಿರೋಧಿಸುತ್ತಿರುವ ರೈತ ಒಕ್ಕೂಟ

ಏಕನಾಥ್ ಶಿಂಧೆ (PTI)
ಮುಂಬೈ: ಶಕ್ತಿಪೀಠ ಎಕ್ಸ್ಪ್ರೆಸ್ವೇ ಹೆದ್ದಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶನಿವಾರ (ಎಪ್ರಿಲ್ 5, 2025) ಕೊಲ್ಲಾಪುರಕ್ಕೆ ಭೇಟಿ ನೀಡಲಿರುವ ಸಂದರ್ಭದಲ್ಲಿ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಹಾಡಿರುವ ಶಿಂಧೆ ಕುರಿತು ಹಾಡಿರುವ ವಿಡಂಬನಾತ್ಮಕ ಹಾಡನ್ನು ಪ್ರದರ್ಶಿಸುವ ಮೂಲಕ ʼಸ್ವಾಗತಿಸಲುʼ ನಿರ್ಧರಿಸಿದ್ದಾರೆ.
ಬಾಲಿವುಡ್ ಹಾಡಿನಿಂದ ಪ್ರೇರಿತವಾದ ಈ ವಿಡಂಬನಾತ್ಮಕ ಹಾಡನ್ನು ಕಾಮ್ರಾ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳಿಸಿದ ಬಳಿಕ, ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಪ್ರದರ್ಶನದ ಸ್ಥಳವಾದ ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಶಿವಸೇನಾ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಈ ನಿಟ್ಟಿನಲ್ಲಿ, ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಇದೇ ಹಾಡನ್ನು ಶಿಂಧೆ ವಿರುದ್ಧ ಪ್ರತಿಭಟನಾತ್ಮಕವಾಗಿ ಬಳಸಲು ರೈತರು ನಿರ್ಧರಿಸಿದ್ದಾರೆ.
ಶಕ್ತಿಪೀಠ ವಿರೋಧಿ ಸಂಘರ್ಷ ಸಮಿತಿಯ ಬ್ಯಾನರ್ ಅಡಿಯಲ್ಲಿ ರೈತರು ಹೆದ್ದಾರಿ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮಹಾಯುತಿ ಸರ್ಕಾರವು ಕಳೆದ ವರ್ಷ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಯೋಜನೆಯನ್ನು ರದ್ದುಗೊಳಿಸುವ ಮತ್ತು ರೈತರಿಗೆ ಸಾಲ ಮನ್ನಾ ಮಾಡುವ ಭರವಸೆಯನ್ನು ನೀಡಿತ್ತು, ಆದರೆ ಭರವಸೆಯನ್ನು ಪೂರೈಸಲಿಲ್ಲ ಎಂದು ಆರೋಪಿಸಿದ್ದಾರೆ.
ನಾಗ್ಪುರದಿಂದ ಗೋವಾವರೆಗಿನ ಪ್ರಸ್ತಾವಿತ ಎಕ್ಸ್ಪ್ರೆಸ್ವೇ ಹೆದ್ದಾರಿಗೆ 2023 ರಲ್ಲಿ ಅನುಮೋದನೆ ನೀಡಲಾಗಿತ್ತು. ಈ ಯೋಜನೆಗೆ 9,385 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದ್ದು, ಇದರಲ್ಲಿ 265 ಹೆಕ್ಟೇರ್ ಅರಣ್ಯ ಭೂಮಿ ಸೇರಿದೆ. ಈ ಹೆದ್ದಾರಿಗೆ 11 ಜಿಲ್ಲೆಗಳ ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಡಲು ಹಿಂಜರಿಯುತ್ತಿದ್ದು, ಈ ಭೂಮಿ ತಮ್ಮ ಏಕೈಕ ಜೀವನೋಪಾಯದ ಮೂಲ ಎಂದು ವಾದಿಸುತ್ತಿದ್ದಾರೆ.
"ಶಿಂಧೆ ತಮ್ಮದೇ ಪಕ್ಷಕ್ಕೆ ಮಾಡಿದ ದ್ರೋಹವನ್ನು ಜನರು ಹಗುರವಾಗಿ ಪರಿಗಣಿಸಿರಬಹುದು. ಆದರೆ ಅವರು ರೈತರಿಗೆ ದ್ರೋಹ ಬಗೆದರೆ ಮತ್ತು ಯೋಜನೆಯನ್ನು ರದ್ದುಗೊಳಿಸಲು ವಿಫಲವಾದರೆ, ನಾವು ಅದನ್ನು ಸಹಿಸುವುದಿಲ್ಲ. ಕಳೆದ ವರ್ಷ, 2,900 ರೈತರು ತಮ್ಮ ಪ್ರಾಣವನ್ನು ಕೊನೆಗೊಳಿಸಿದ್ದಾರೆ... ಆದರೆ, ಈ ಜನರು (ಸರ್ಕಾರ) ವಿಜಯ ಮೇಳವನ್ನು [ವಿಜಯ ಮೇಳ] ಆಯೋಜಿಸುತ್ತಿದ್ದಾರೆ. ಇದು ರೈತರ ಗಾಯಗಳಿಗೆ ಉಪ್ಪು ಸವರಿದಂತೆ. ಮಾರ್ಚ್ 12 ರಂದು ಮುಂಬೈಗೆ ನಾವು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ರೈತರನ್ನು ಭೇಟಿಯಾಗಲಿಲ್ಲ. ಅವರಿಗೆ ಕೊಲ್ಲಾಪುರಕ್ಕೆ ಬರುವ ಹಕ್ಕಿಲ್ಲ," ಎಂದು ಶಕ್ತಿಪೀಠ ವಿರೋಧಿ ಸಂಘರ್ಷ ಸಮಿತಿ ಸಂಯೋಜಕ ಗಿರೀಶ್ ಫೋಂಡೆ ಹೇಳಿದರು.