ತಂದೆಯ ಭೇಟಿಯ ಹಕ್ಕು ಮಗುವಿನ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ವಿಚ್ಛೇದನ ಪ್ರಕರಣವೊಂದರಲ್ಲಿ ತಂದೆಯು ತನ್ನ ಮಗುವನ್ನು ಭೇಟಿ ಮಾಡುವ ಹಕ್ಕನ್ನು ಎತ್ತಿ ಹಿಡಿದಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ತಂದೆಯ ಭೇಟಿಯ ಹಕ್ಕು ಮಗುವಿನ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ನ್ಯಾಯಪೀಠವು, ವಿಚ್ಛೇದನ ಪ್ರಕರಣವು ವಿಲೇವಾರಿಗೆ ಬಾಕಿ ಇರುವಾಗ, ತಂದೆಯ ಭೇಟಿ ನೀಡುವ ಹಕ್ಕನ್ನು ಜಾಗರೂಕವಾಗಿ ಹಾಗೂ ಸಹಾನುಭೂತಿಯಿಂದ ಪರಿಗಣಿಸಬೇಕಾಗುತ್ತದೆ ಎಂದು ಹೇಳಿತು.
ವೈದ್ಯ ದಂಪತಿಗಳಿಬ್ಬರ ವಿಚ್ಛೇದನ ಪ್ರಕರಣ ಇನ್ನೂ ವಿಲೇವಾರಿಗೆ ಬಾಕಿ ಇರುವುದನ್ನು ಪರಿಗಣಿಸಿದ್ದ ಮದ್ರಾಸ್ ಹೈಕೋರ್ಟ್, ತಂದೆಯು ತನ್ನ ಎರಡು ವರ್ಷದ ಮಗಳನ್ನು ಭೇಟಿ ಮಾಡುವ ಹಕ್ಕನ್ನು ಮಾನ್ಯ ಮಾಡಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಗುವಿನ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ನನ್ನ ಪುತ್ರಿ ಜೂನ್ 6, 2022ರಂದು ಜನಿಸಿದ್ದು, ನಾವು ದಂಪತಿಗಳಿಬ್ಬರೂ ಆಗಸ್ಟ್ 18, 2022ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಹೀಗಾಗಿ, ನನ್ನ ಪತಿಯೆಂದೂ ನನ್ನ ಪುತ್ರಿಯ ಆರೈಕೆ ಮಾಡಿಲ್ಲ ಹಾಗೂ ಆಕೆಯೊಂದಿಗೆ ಉಳಿದಿಲ್ಲ. ಹೀಗಾಗಿ, ಆತ ನನ್ನ ಪುತ್ರಿಗೆ ಅಪರಿಚಿತನಾಗಿದ್ದಾನೆ ಎಂದು ಮಗುವಿನ ತಾಯಿ ವಾದಿಸಿದ್ದರು.
ಪ್ರತಿ ರವಿವಾರ ಸುಮಾರು 300 ಕಿಮೀ ದೂರವಿರುವ ಕರೂರ್ ಗೆ ನನ್ನ ಪುತ್ರಿಯನ್ನು ಕರೆದೊಯ್ಯುವುದರಿಂದ ಆಕೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದೂ ಆಕೆ ವಾದಿಸಿದ್ದರು.
ಮಗುವಿನ ತಾಯಿಯ ವಾದವನ್ನು ಮಾನ್ಯ ಮಾಡಿರುವ ಸುಪ್ರೀಂ ಕೋರ್ಟ್, ವಿಚ್ಛೇದನ ಪ್ರಕರಣ ವಿಲೇವಾರಿಗೆ ಬಾಕಿ ಇರುವಾಗ, ತಂದೆಯ ಭೇಟಿಯ ಹಕ್ಕಿಗಿಂತ, ಮಗುವಿನ ಆರೋಗ್ಯ ಮತ್ತು ಸ್ವಾಸ್ಥ್ಯವೇ ಪ್ರಧಾನವಾಗುತ್ತದೆ. ಹೀಗಾಗಿ, ಮಗುವನ್ನು ಪ್ರತಿ ರವಿವಾರ 300 ಕಿಮೀ ದೂರವಿರುವ ಕರೂರ್ ಗೆ ಕರೆದೊಯ್ಯುವ ಬದಲು, ಸುಮಾರು 150 ಕಿಮೀ ದೂರವಿರುವ ಮದುರೈಗೆ ಕರೆದೊಯ್ಯಬೇಕು ಎಂದು ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿದೆ.
ಡಿಸೆಂಬರ್ 20ರಂದು ಸುಪ್ರೀಂ ಕೋರ್ಟ್ ನಿಂದ ಈ ಆದೇಶ ಹೊರ ಬಿದ್ದಿದೆ.
ನನ್ನ ಮೇಲೆ ಕೌಟುಂಬಿಕ ಹಿಂಸಾಚಾರ, ಜೀವ ಬೆದರಿಕೆ ಹಾಗೂ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿ ಮಗುವಿನ ತಾಯಿ ಕೌಟುಂಬಿಕ ನ್ಯಾಯಾಲಯದೆದುರು ವಿಚ್ಛೇದನ ಅರ್ಜಿ ಸಲ್ಲಿಸಿದ್ದು, ಅದಿನ್ನೂ ಇತ್ಯರ್ಥವಾಗಬೇಕಿದೆ.
ಸೌಜನ್ಯ: deccanherald.com