2020ರ ದಿಲ್ಲಿ ಗಲಭೆ | ಜನವರಿ 7ರಂದು ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಅರ್ಜಿ ವಿಚಾರಣೆ : ದಿಲ್ಲಿ ಹೈಕೋರ್ಟ್
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ | PTI
ಹೊಸದಿಲ್ಲಿ: ಫೆಬ್ರವರಿ 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆಯಡಿ ಆರೋಪಿಗಳಾಗಿರುವ ಹೋರಾಟಗಾರರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಹಾಗೂ ಇನ್ನಿತರರ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 7ರಂದು ದಿಲ್ಲಿ ಹೈಕೋರ್ಟ್ ನಡೆಸಲಿದೆ.
ಶುಕ್ರವಾರ ಅಲಭ್ಯರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಈ ಪ್ರಕರಣದ ಸಂಬಂಧ ವಾದಿಸಲಿದ್ದಾರೆ ಎಂದು ದಿಲ್ಲಿ ಪೊಲೀಸರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರಿಂದ, ನ್ಯಾ. ನವೀನ್ ಚಾವ್ಲಾ ಮತ್ತು ಶೈಲೇಂದರ್ ಕೌರ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.
“ನಾವು ಇಂತಹ ಜಾಮೀನು ಅರ್ಜಿಗಳನ್ನು ಹೇಗೆ ಮುಂದೂಡಲು ಸಾಧ್ಯ? ಕಳೆದ ಬಾರಿ ಕೂಡಾ ನ್ಯಾಯಪೀಠವೊಂದು ಇಂತಹ ಕಾರಣವನ್ನು ಕೇಳಿ, ಬಿಡುಗಡೆಗೊಳಿಸಿತ್ತು” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಚಳಿಗಾಲ ರಜೆ ಮುಕ್ತಾಯವಾಗುತ್ತಿದ್ದಂತೆಯೆ, ನಾವು ಈ ಪ್ರಕರಣದ ವಿಚಾರಣೆಯನ್ನು ಮೊದಲಿಗೇ ನಡೆಸಲಿದ್ದೇವೆ ಎಂದು ನ್ಯಾಯಾಲಯ ಹೇಳಿತು.
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಡೆದಿದ್ದ ಪ್ರತಿಭಟನೆಯ ವೇಳೆ ನಡೆದಿದ್ದ ಹಿಂಸಾಚಾರದ ಸಂಬಂಧ ಈ ಪ್ರಕರಣ ದಾಖಲಾಗಿದೆ.