‘ನಾಯಕ್’ ಚಿತ್ರದ ನಾಯಕನಂತೆ ಭಾಸವಾಗಿತ್ತು: ದಿಲ್ಲಿ ಸಿಎಂ ಆಗಿ ತನ್ನ ಆಯ್ಕೆ ಕುರಿತು ರೇಖಾ ಗುಪ್ತಾ

ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ | PC : PTI
ಹೊಸದಿಲ್ಲಿ : ಸಿಎಂ ಹುದ್ದೆಗೆ ಆಯ್ಕೆಯಾದ ಬಳಿಕ ಹಿಂದಿ ಚಿತ್ರ ‘ನಾಯಕ್’ನ ನಾಯಕನಂತೆ ತನಗೆ ಭಾಸವಾಗಿತ್ತು ಎಂದು ಶುಕ್ರವಾರ ಇಲ್ಲಿ ಹೇಳಿದ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು,ಇದು ‘ಲಾಟರಿ’ಯಲ್ಲ, ಬದಲಾಗಿ ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಸಂದ ಗೌರವವಾಗಿದೆ ಎಂದು ಪ್ರತಿಪಾದಿಸಿದರು.
ಇಂಡಿಯಾ ಟುಡೇ ಕಾಂಕ್ಲೇವ್ನಲ್ಲಿ ಮಾತನಾಡಿದ ಗುಪ್ತಾ, ತನ್ನ ಸರಕಾರವು ಮೂರು ವರ್ಷಗಳಲ್ಲಿ ಯಮುನಾ ನದಿಯ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಲಿದೆ ಮತ್ತು ಅದರಲ್ಲಿ ದೋಣಿ ಸೇವೆಯನ್ನು ಆರಂಭಿಸಲಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಮತ್ತು ಮಳೆಗಾಲದಲ್ಲಿ ನೀರು ನಿಂತುಕೊಳ್ಳುವ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಹಲವಾರು ಹಿರಿಯ ನಾಯಕರು ಮತ್ತು ಶಾಸಕರಿದ್ದರೂ ಮುಖ್ಯಮಂತ್ರಿ ಹುದ್ದೆಗೆ ತನ್ನ ಆಯ್ಕೆ ಕುರಿತು ಪ್ರಶ್ನೆಗೆ ಗುಪ್ತಾ,‘ಯಾರಿಗೂ ತಪ್ಪು ತಿಳುವಳಿಕೆ ಬೇಡ, ಈ ಗೆಲುವಿಗೆ ದಿಲ್ಲಿಯ ಜನತೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಕಾರಣ. ಇದು ಒಂದು ಹುದ್ದೆಯಲ್ಲ,ಇದು ಕೆಲಸ ಮತ್ತು ಜವಾಬ್ದಾರಿಯಾಗಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿಗೊಂಡ ದಿಲ್ಲಿ ನಮ್ಮ ಗುರಿಯಾಗಿದೆ ’ ಎಂದು ಉತ್ತರಿಸಿದರು.
ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಮುಂಚೂಣಿಯಲ್ಲಿರಲು ಅವಕಾಶಗಳು ದೊರೆಯುತ್ತಿಲ್ಲ ಎಂದು ಒತ್ತಿ ಹೇಳಿದ ಅವರು, ದಿಲ್ಲಿ ಮುಖ್ಯಮಂತ್ರಿಯಾಗಿ ತನ್ನ ನೇಮಕವು ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಸಂದಿರುವ ಗೌರವವಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ಉತ್ಸಾಹವಿದೆ ಎಂದರು.
ಮುಖ್ಯಮಂತ್ರಿಯಾಗಿ ಓರ್ವ ಮಹಿಳೆಯ ನೇಮಕ ಪಕ್ಷದ ಮತ್ತು ಪ್ರಧಾನಿ ಮೋದಿಯವರ ಅತ್ಯಂತ ಮಹತ್ವದ ನಿರ್ಧಾರವಾಗಿತ್ತು. ಇದು ಕೇವಲ ಸಾಂಕೇತಿಕ ಸುಧಾರಣೆಯಲ್ಲ,ನಿರ್ಧಾರಗಳನ್ನು ತೆಗೆದುಕೊಳ್ಳುವ ಉನ್ನತ ಹುದ್ದೆಗಳಿಗೆ ಮಹಿಳೆಯರ ಪದೋನ್ನತಿಯ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಹೇಳಿದ ಗುಪ್ತಾ,ಇದು ಕನಸು ನನಸಾದಂತೆ ಅಲ್ಲ, ಹುದ್ದೆಗೆ ಆಯ್ಕೆಯಾದಾಗ ತಾನು ತನ್ನದೇ ದಾರಿಯಲ್ಲಿ ಸಾಗುತ್ತಿದ್ದೆ ಎಂದರು.
ಬಿಜೆಪಿಯ ಡಬಲ್ ಇಂಜಿನ್ ಸರಕಾರ ರಾಷ್ಟ್ರ ರಾಜಧಾನಿಯನ್ನು ಅಭಿವೃದ್ಧಿ ಹೊಂದಿದ ನಗರವಾಗಿಸಲು ಅತ್ಯುತ್ತಮ ಮಾರ್ಗವಾಗಿದೆ ಎನ್ನುವುದನ್ನು ದಿಲ್ಲಿಗರು ಈಗ ಅರ್ಥ ಮಾಡಿಕೊಂಡಿದ್ದಾರೆ ಎಂದ ಗುಪ್ತಾ,ಇಡೀ ಪಕ್ಷದ ನಾಯಕತ್ವವು ತನ್ನ ಜೊತೆಯಲ್ಲಿದೆ ಎಂದು ಭರವಸೆ ನೀಡಿದರು.
ದಿಲ್ಲಿಯ ಜನರು ನೂತನ ಸರಕಾರದಿಂದ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದ ಅವರು,ಮೂಲಭೂತ ಸೌಲಭ್ಯಗಳನ್ನು ಬಲಗೊಳಿಸಲು ಮತ್ತು ದಿಲ್ಲಿಯನ್ನು ಆಧುನಿಕ ನಗರವನ್ನಾಗಿ ಅಭಿವೃದ್ಧಿಗೊಳಿಸಲು ತಾನು ಶ್ರಮಿಸುತ್ತೇನೆ ಎಂದು ಹೇಳಿದರು.
ತಾನು ಜನರ ನಡುವೆ ವಾಸವಿರುತ್ತೇನೆ, ‘ಶೀಷ್ ಮಹಲ್’ನಲ್ಲಿ ಅಲ್ಲ ಎಂದು ಒತ್ತಿ ಹೇಳಿದ ಗುಪ್ತಾ,ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಸವಿದ್ದ ಬಂಗಲೆಯನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸಲಾಗುವುದು ಎಂದು ತಿಳಿಸಿದರು.